ಜನರ ಬಳಕೆಗೆ ಬಾಗಿಲು ತೆರೆದ ಸಾರ್ವಜನಿಕ ಗ್ರಂಥಾಲಯಗಳು
ಉಡುಪಿ, ಸೆ.12: ಕೋವಿಡ್-19ರಿಂದ ಕಳೆದ ಆರು ತಿಂಗಳಿಗೂ ಅಧಿಕ ಸಮಯದಿಂದ ಮುಚ್ಚಿದ್ದ ಜಿಲ್ಲೆಯ ಸಾರ್ವಜನಿಕ ಗ್ರಂಥಾಲಯಗಳು ಇಂದಿನಿಂದ ಪುನಹ ಸಾರ್ವಜನಿಕರ ಬಳಕೆಗೆ ತೆರೆದುಕೊಂಡಿವೆ ಎಂದು ಉಡುಪಿ ಗ್ರಂಥಾಲಯಾಧಿಕಾರಿ ನಳಿನಿ ಅವರು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ಆದೇಶವನ್ನು ಅನುಸರಿಸಿ ರಾಜ್ಯ ಸರಕಾರ ಕಂಟೈನ್‌ಮೆಂಟ್ ಹೊರಗಿನ ಪ್ರದೇಶಗಳಲ್ಲಿ ಕಾರ್ಯಚಟುವಟಿಕೆ ಗಳನ್ನು ಪುನರಾರಂಭಿಸಲು ತೆರವು-4 ಮಾರ್ಗಸೂಚಿಯಲ್ಲಿ ಇದೀಗ ಸಾರ್ವಜನಿಕ ಗ್ರಂಥಾಲಯ ತೆರೆಯಲು ಅನುಮತಿ ನೀಡಿ ಆದೇಶ ಸೆ.11ರಂದು ಹೊರಡಿಸಿದೆ.
ಕೋವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹೊರಡಿಸಿದ ನಿರ್ದೇಶನ ಹಾಗೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಗ್ರಂಥಾಲಯ ಪ್ರವೇಶಿ ಸುವವರನ್ನು ಥರ್ಮಲ್ ತಪಾಸಣೆಗೊಳಪಡಿಸಿ ಸಾರ್ವಜನಿಕ ಗ್ರಂಥಾಲಯಗಳ ಸೇವೆಯನ್ನು ಸಾರ್ವಜನಿಕರಿಗೆ ನೀಡುವಂತೆ ಗ್ರಂಥಾಲಯಗಳ ಮುಖ್ಯಸ್ಥರಿಗೆ ಸೂಚಿಸಿದೆ.
ಉಡುಪಿಯ ನಗರಸಭೆ ಬಳಿ ಇರುವ ಕೇಂದ್ರ ಗ್ರಂಥಾಲಯ ವಾರದ ರಜಾದಿನವಾದ ಸೋಮವಾರ ಹಾಗೂ ಇತರ ರಾಷ್ಟ್ರೀಯ ರಜಾ ದಿನಗಳನ್ನು ಹೊರತು ಪಡಿಸಿ ಉಳಿದಂತೆ ಪ್ರತಿದಿನ ಬೆಳಗ್ಗೆ 9:00ರಿಂದ ಸಂಜೆ 7:00ರವರೆಗೆ ತೆರೆದಿರುತ್ತದೆ ಎಂದು ನಳಿನಿ ತಿಳಿಸಿದ್ದಾರೆ.