ಅಯೋಧ್ಯೆ ಮಸೀದಿಗೆ ಕೋಡಿ ಬದ್ರಿಯಾ ಮಸ್ಜಿದ್ ಸ್ಫೂರ್ತಿ !
ಹೊಸದಿಲ್ಲಿ/ ಕುಂದಾಪುರ, ಸೆ.12: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ನೂತನ ಮಸೀದಿಯ ವಿನ್ಯಾಸ ಅತ್ಯಂತ ಆಧುನಿಕ ಹಾಗೂ ಅಷ್ಟೇ ಪರಿಸರ ಸ್ನೇಹಿಯಾಗಿರಲಿದೆ. ಈ ಹೊಸ ಆಯಾಮಕ್ಕೆ ಮಸೀದಿಯ ವಿನ್ಯಾಸಕಾರರಿಗೆ ಸ್ಫೂರ್ತಿ ನೀಡಿರುವುದು ಕುಂದಾಪುರದ ಕೋಡಿಯಲ್ಲಿರುವ ಬದ್ರಿಯಾ ಜುಮಾ ಮಸೀದಿ ಎಂಬುದು ವಿಶೇಷ.
ವಿನ್ಯಾಸ, ನಿರ್ಮಾಣ ಎಲ್ಲದರಲ್ಲೂ ವಿಶಿಷ್ಟವಾಗಿರುವ ಇದು ವಿಶ್ವದಲ್ಲೇ ಪ್ರಪ್ರಥಮ ಪರಿಸರ ಸ್ನೇಹಿ ಮಸೀದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ ಇದರ ವೈಶಿಷ್ಟ್ಯ ರಾಷ್ಟ್ರ, ಅಂತರ್ ರಾಷ್ಟ್ರೀಯ ಮಟ್ಟದಲ್ಲೂ ಇತರರಿಗೆ ಮಾದರಿಯಾಗಿರುವುದು ಕರ್ನಾಟಕದ ಪಾಲಿನ ಹೆಮ್ಮೆಯಾಗಿದೆ.
ಉದ್ದೇಶಿತ ಮಸೀದಿಯ ವಿನ್ಯಾಸ ರೂಪಿಸುತ್ತಿರುವ ಹೊಸದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನ ಸ್ಥಾಪಕ ಪ್ರಾಧ್ಯಾಪಕ ಎಸ್.ಎಂ.ಅಖ್ತರ್ ಈ ಸುಳಿವು ನೀಡಿದ್ದಾರೆ. ಹಳೆಯದನ್ನು ಅನುಕರಿಸದೆ ಆಧುನಿಕ ಮಾದರಿಯನ್ನು ಪರಿಶೀಲಿಸುತ್ತಿ ದ್ದೇನೆ. ಸಾಮಾನ್ಯವಾಗಿ ಇರುವ ಮಸೀದಿಗಳ ರೀತಿಯಲ್ಲಿ ನೂತನ ಮಸೀದಿ ನಿರ್ಮಾಣವಾಗುವುದಿಲ್ಲ. ಅಂದರೆ ಗುಮ್ಮಟ ಅಥವಾ ಕಮಾನು ಅಗತ್ಯ ಇಲ್ಲ ಎಂದು ಪ್ರತಿಪಾದಿಸಿರುವ ಅವರು, ಈ ಹಿನ್ನೆಲೆಯಲ್ಲಿ ಕುಂದಾಪುರ ಕೋಡಿಯ ಬದ್ರಿಯಾ ಜುಮಾ ಮಸೀದಿ ಮತ್ತು ಕತರ್‌ನ 'ಸ್ಪೇಸ್ ಶಿಪ್' ಮಸೀದಿಗಳನ್ನು ಮಾದರಿಯಾಗಿ ಉಲ್ಲೇಖಿಸಿದ್ದಾರೆ.
ಕುಂದಾಪುರದ ಕೋಡಿ ಎಂಬ ಪುಟ್ಟ ಗ್ರಾಮದಲ್ಲಿರುವ ಬದ್ರಿಯಾ ಜುಮಾ ಮಸ್ಜಿದ್ ಇಸ್ಲಾಮಿಕ್ ಆರ್ಕಿಟೆಕ್ಚರ್, ಅತ್ಯಾಧುನಿಕ ವಿನ್ಯಾಸ ಹಾಗೂ ಪರಿಸರ ಸ್ನೇಹಿ ನಿರ್ಮಾಣದ ತಂತ್ರಜ್ಞಾನಗಳ ಸಂಗಮವಾಗಿದೆ. ಪರಿಸರ ಸ್ನೇಹಿ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಕೋಡಿ ಮೂಲದ ಬೆಂಗಳೂರಿನ ಬ್ಯಾರೀಸ್ ಗ್ರೂಪ್ ಈ ವಿಶಿಷ್ಟ ಮಸೀದಿಯ ನಿರ್ಮಾಪಕರು. ಖ್ಯಾತ ಆರ್ಕಿಟೆಕ್ಟ್ ಗಳಾದ ಸಂದೀಪ್ ಜೆ. ಹಾಗೂ ಮನೋಜ್ ಲದ್ಹಾದ್ ಮಸೀದಿಯ ವಿನ್ಯಾಸ ಮಾಡಿದ್ದಾರೆ. ಸುಮಾರು 15,000 ಚದರ ಅಡಿ ವಿಸ್ತೀರ್ಣದ ಈ ಮಸೀದಿ ಕಟ್ಟಡವು ಜಾಗತಿಕ ತಾಪಮಾನವನ್ನು ಯಾವ ರೀತಿ ಕಡಿಮೆ ಮಾಡಬಹುದೆಂಬ ಸೂತ್ರವನ್ನು ಹೊಂದಿದೆ ಎಂದು ಬ್ಯಾರೀಸ್ ಗ್ರೂಪ್ ಹಾಗೂ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ ರಾಜ್ಯಾಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ತಿಳಿಸಿದ್ದಾರೆ.
ಕೋಡಿ ಮಸೀದಿಯ ವಿಶೇಷತೆಗಳು
ಈ ಮಸೀದಿಯಲ್ಲಿ ಪ್ರಾಕೃತಿಕ ನಿಯಮಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡು ಕಟ್ಟಡ ಸದಾ ತಂಪಾಗಿರುವಂತೆ ನೋಡಿಕೊಳ್ಳಲಾಗಿದೆ. ಮಸೀದಿಯ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಗೋಡೆ ಬದಲು ಜಾಲಿಗಳನ್ನು ಅಳವಡಿಸಲಾಗಿದೆ. ಇದರಿಂದ ಮಸೀದಿಯೊಳಗೆ ಸದಾ ಗಾಳಿ ಹಾಗೂ ಬೆಳಕು ಬರುತ್ತಿರುತ್ತವೆ. ಸುತ್ತಮುತ್ತಲೂ ಹಸಿರು ಮರಗಿಡಗಳು, ನೀರಿನ ಟ್ಯಾಂಕ್‌ಗಳಿರುವುದರಿಂದ ಮಸೀದಿಯೊಳಗೆ ತಾಪಮಾನ ಏರಿಕೆಯು ಕನಿಷ್ಠ ಮಟ್ಟದಲ್ಲಿರುತ್ತದೆ. ‘ಎಲ್’ ಆಕಾರದಲ್ಲಿ ಮಸೀದಿ ಕಟ್ಟಡವನ್ನು ನಿರ್ಮಿಸಲಾಗಿದೆ. ಮುಖ್ಯ ಪ್ರಾರ್ಥನಾ ವಲಯವನ್ನು ನೆಲಮಟ್ಟಕ್ಕಿಂತ ಎತ್ತರದಲ್ಲಿ ನೈಸರ್ಗಿಕವಾಗಿ ತಂಪಾಗಿರುವಂತೆ ನಿರ್ಮಿಸಲಾಗಿದೆ.
ಬಿಳಿ ಚೀನಾ ಟೈಲ್ಸ್‌ಗಳನ್ನು ಹಾಕಿ ವಿಶೇಷ ಟರ್ಬೊ ದ್ವಾರಗಳನ್ನು ಅಳವಡಿಸಿರುವ ತಾರಸಿ, ಇಡೀ ಮಸೀದಿಯನ್ನು ಬಿಸಿಲಿನ ತಾಪದಿಂದ ಮುಕ್ತಗೊಳಿಸಿ ತಂಪಾಗಿರಿಸುತ್ತಿದೆ. ಕಟ್ಟಡ ನಿರ್ಮಾಣಕ್ಕೆ ವಿಶೇಷ ಸ್ವರೂಪದ (ನಾನ್ ಕಂಡಕ್ಟಿಂಗ್ ಗ್ಲಾಸ್ ರಿ ಇನ್‌ಫೋರ್ಸ್ಡ್) ಕಾಂಕ್ರಿಟ್ ಬಳಸಿ ಸ್ವಾಭಾವಿಕ ಗಾಳಿ ಮತ್ತು ಬೆಳಕು ಧಾರಾಳ ಸಿಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ಮಸೀದಿಯ 70 ಅಡಿ ಎತ್ತರದ ಮಿನಾರ ಕೇವಲ ಪ್ರಾರ್ಥನೆಗೆ ಕರೆ ನೀಡಲು, ಸೌಂದರ್ಯಕ್ಕೆ ಸೀಮಿತವಾಗಿರದೆ ಪ್ರಾರ್ಥನಾ ವಲಯವನ್ನು ತಣ್ಣಗಾಗಿಸುತ್ತಿವೆ. ಈ ಮಿನಾರದ ಮೇಲೆಯೇ ಗಾಳಿಯನ್ನು ಬಳಸಿ ವಿದ್ಯುತ್ ಉತ್ಪಾದಿಸುವ ವಿಂಡ್ ಟರ್ಬೈನ್ ಅನ್ನು ಅಳವಡಿಸಲಾಗಿದೆ. ಮಸೀದಿ ಸಭಾಂಗಣದಲ್ಲಿ ಸುಮಾರು ಎರಡು ಸಾವಿರದಷ್ಟು ಜನರು ನಮಾಝ್ ನಿರ್ವಹಿಸಬಹುದು.
ಮಸೀದಿಯ ಗೋಡೆಗಳಲ್ಲಿ ಕುರ್‌ಆನ್ ಸೂಕ್ತಗಳನ್ನು ಕಲಾತ್ಮಕವಾಗಿ ಬರೆಯಲಾಗಿರುವ ಅರೆಬಿಕ್ ಭಾಷೆಯ ಆಕರ್ಷಕ ಕ್ಯಾಲಿಗ್ರಫಿ ಗಮನ ಸೆಳೆಯುತ್ತವೆ. ಬೆಂಗಳೂರಿನ ಬ್ಯಾರೀಸ್ ಗ್ರೂಪ್‌ನ ಇನ್‌ಸ್ಟಿಟ್ಯೂಟ್ ಆಫ್ ಇಂಡೋ ಇಸ್ಲಾಮಿಕ್ ಆರ್ಟ್ ಆ್ಯಂಡ್ ಕಲ್ಚರ್‌ನ ಪ್ರಾಂಶುಪಾಲ ಮುಖ್ತಾರ್ ಅಹ್ಮದ್ ಈ ಕಲಾಕೃತಿಗಳನ್ನು ರಚಿಸಿದ್ದಾರೆ.
ಮಸೀದಿ ಇತಿಹಾಸ: ಸೈಯದ್ ಮುಹಮ್ಮದ್ ಬ್ಯಾರಿಯವರ ಅಜ್ಜ ಸೂಫಿ ಸಾಹೇಬ್ ಹಜ್ ಯಾತ್ರೆಗಾಗಿ ಹಣ ಸಂಗ್ರಹಿಸಿದ್ದರು. ಆದರೆ ಅನಾರೋಗ್ಯದಿಂದಾಗಿ ಅವರಿಗೆ ಹಜ್ ನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಆ ಹಣದಿಂದ ಅವರು ಕೋಡಿಯಲ್ಲಿ ಸುಮಾರು 90 ವರ್ಷಗಳ ಹಿಂದೆ ಈ ಮಸೀದಿಯನ್ನು ನಿರ್ಮಿಸಿದ್ದರು. ನಂತರ 50 ವರ್ಷಗಳ ಹಿಂದೆ ಈ ಮಸೀದಿಯನ್ನು ನವೀಕರಣಗೊಳಿಸಲಾಯಿತು. ಇತ್ತೀಚೆಗೆ ಸೂಫಿ ಸಾಹೇಬರ ಮೊಮ್ಮಕ್ಕಳು ಆ ಮಸೀದಿಯನ್ನು ಮತ್ತೆ ಸಂಪೂರ್ಣವಾಗಿ ನವೀಕರಣಗೊಳಿಸಿ ಅದನ್ನು ಇಡೀ ವಿಶ್ವವೇ ಗುರುತಿಸುವಂತೆ ಮಾಡಿದ್ದಾರೆ. ಮಸೀದಿ ಆವರಣದಲ್ಲಿ ಹಿರಿಯರು ನೆಟ್ಟ ಮಾವು, ಹೊನ್ನೆ, ತೆಂಗಿನ ಮರಗಳನ್ನು ಹಾಗೆಯೇ ಉಳಿಸಿಕೊಂಡು ಲಾನ್ ನಿರ್ಮಿಸಲಾಗಿದೆ.
ಪರಿಸರ ಸ್ನೇಹಿ ನಿರ್ಮಾಣದಲ್ಲಿ ವಿಶ್ವಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ನಮ್ಮ ದೇಶಕ್ಕೆ ನಾವು ನೀಡಿದ ಪುಟ್ಟ ಕೊಡುಗೆ ಇದು. ಮಂದಿರ, ಮಸೀದಿ, ಚರ್ಚ್ ಗಳು ಪರಿಸರ ಸ್ನೇಹಿಯಾಗಿ ನಿರ್ಮಾಣವಾದರೆ ಅಲ್ಲಿಗೆ ಬರುವ ಶ್ರದ್ಧಾಳುಗಳು ತಮ್ಮ ಮನೆ, ಕಚೇರಿ ಇತ್ಯಾದಿ ನಿರ್ಮಾಣದಲ್ಲೂ ಅದೇ ನೀತಿಯನ್ನು ಅಳವಡಿಸಿಕೊಳ್ಳುತ್ತಾರೆ. ಇದರಿಂದ ನಾವು ಮುಂದಿನ ಪೀಳಿಗೆಗೆ ಅತ್ಯುತ್ತಮ ಕೊಡುಗೆ ನೀಡಿದಂತಾಗುತ್ತದೆ. ನಮ್ಮ ಪ್ರಯತ್ನ ಈ ನಿಟ್ಟಿನಲ್ಲಿ ಸಾಗಿದೆ.
- ಸಯ್ಯದ್ ಮುಹಮ್ಮದ್ ಬ್ಯಾರಿ , ಅಧ್ಯಕ್ಷರು, ಐಜಿಬಿಸಿ, ಬೆಂಗಳೂರು