×
Ad

ಉಡುಪಿ ಜಿಲ್ಲಾ ರಸ್ತೆ ಸುರಕ್ಷತಾ ಯೋಜನೆ ಶೀಘ್ರ ಸಿದ್ಧಪಡಿಸಿ: ಜಿಲ್ಲಾಧಿಕಾರಿ

Update: 2020-09-12 19:41 IST

 ಉಡುಪಿ, ಸೆ.12: ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಸಿದ್ದಪಡಿಸಿರುವ ಕ್ರಿಯಾ ಯೋಜನೆಯಂತೆ ಉಡುಪಿ ಜಿಲ್ಲಾ ರಸ್ತೆ ಸುರಕ್ಷತಾ ಕ್ರಿಯಾ ಯೋಜನೆಯನ್ನು ಶೀಘ್ರದಲ್ಲಿ ಸಿದ್ದಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಕ್ರಿಯಾ ಯೋಜನೆಯಂತೆ, ಸಾರಿಗೆ, ಪೊಲೀಸ್, ಆರೋಗ್ಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಪಂ.ರಾಜ್ ಇಂಜಿನಿಯರಿಂಗ್ ಇಲಾಖೆ ಮತ್ತು ನಗರಸಭೆ ವತಿ ಯಿಂದ ಕ್ರಿಯಾ ಯೋಜನೆ ಸಿದ್ದಪಡಿಸಿ, ಕ್ರಿಯಾ ಯೋಜನೆಯ ಚಟುವಟಿಕೆಗಳು ಮತ್ತು ಇದಕ್ಕೆ ತಗಲುವ ಅಂದಾಜು ವೆಚ್ಚದ ವಿವರಗಳನ್ನು ಒಂದು ವಾರದಲ್ಲಿ ಸಲ್ಲಿಸುವಂತೆ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಉಡುಪಿ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡುವ ಕುರಿತಂತೆ ಸ್ಥಳ ಗುರುತಿಸಲಾಗಿದ್ದು, ಶೀಘ್ರದಲ್ಲಿ ಟೆಂಡರ್ ಕರೆದು ಅದನ್ನು ಅನುಷ್ಠಾನಗೊಳಿಸುವಂತೆ ಪೌರಾಯುಕ್ತರಿಗೆ ಸೂಚಿಸಿದ ಡಿಸಿ, ನಗರದಲ್ಲಿ ಸಮರ್ಪಕ ರೀತಿಯಲ್ಲಿ ಝೀಬ್ರಾ ಕ್ರಾಸ್ ಮತ್ತು ವೈಜ್ಞಾನಿಕ ರೀತಿಯಲ್ಲಿ ಹಂಪ್ ಗಳನ್ನು ಅಳವಡಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಮಾಣ ಹೆಚ್ಚಾಗಿದ್ದು, ಕಳೆದ ವರ್ಷ 260 ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆ ಸುರಕ್ಷತಾ ನಿಯಮ ಗಳಂತೆ ಅಪಘಾತ ಪ್ರಮಾಣ ಶೇ.10ಕ್ಕಿಂತ ಕಡಿಮೆ ಇರುವಂತೆ ಕ್ರಮ ಕೈಗೊಳ್ಳಬೇಕಿದ್ದು, ರಾ.ಹೆದ್ದಾರಿಯಲ್ಲಿರುವ ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿ ವರದಿ ನೀಡಿದ್ದು, ಆದ್ಯತೆಯ ಮೇರೆಗೆ ಅಗತ್ಯ ಕಾಮಗಾರಿ ಕೈಗೊಳ್ಳಬೇಕು ಎಂದರು.

ಎಲ್ಲಾ ಬ್ಲಾಕ್‌ಸ್ಪಾಟ್‌ಗಳಲ್ಲಿ ಅಗತ್ಯವಿರುವ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಯನ್ನು ಅನುಮೋದನೆಗೆ ಸಲ್ಲಿಸಿದ್ದು, ಅನುಮೋದನೆಗೊಂಡು ಬಂದ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ರಾ.ಹೆದ್ದಾರಿಯ ಯೋಜನಾ ನಿರ್ದೇಶಕರು ತಿಳಿಸಿದರು.

ಇಂದ್ರಾಳಿಯಿಂದ ಟೈಗರ್ ಸರ್ಕಲ್‌ವರೆಗೆ ರಸ್ತೆ ವಿಭಜಕ ಇಲ್ಲದಿರುವುದರಿಂದ ರಸ್ತೆ ಎರಡೂ ಬದಿ ಇರುವ ನಿವಾಸಿಗಳಿಗೆ ತೊಂದರೆ ಯಾಗುತ್ತಿ ರುವ ಬಗ್ಗೆ ಸಾರ್ವಜನಿಕರಿಂದ ಹೆಚ್ಚು ದೂರು/ಮನವಿಗಳು ಬರುತ್ತಿದ್ದು, ಲಕ್ಷ್ಮೀಂದ್ರ ನಗರ ಅಥವಾ ಅದಕ್ಕಿಂತ ಸ್ವಲ್ಪ ಮುಂದೆ ರಸ್ತೆ ವಿಭಜಕ ನಿರ್ಮಿಸುವ ಅಗತ್ಯವಿದೆ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ರಾ.ಹೆದ್ದಾರಿ 169ಎನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಗುಂಡಿಬೈಲು -ದೊಡ್ಡಣಗುಡ್ಡೆ ರಸ್ತೆಯಲ್ಲಿ ಹಂಪ್ಸ್ ಅಳವಡಿಕೆ, ಅಜ್ಜರಕಾಡಿನ ಲಾಲ್‌ಬಹದ್ದೂರ್ ಶಾಸ್ತ್ರಿ ಜಂಕ್ಷನ್ ಸಂಧಿಸುವ ರಸ್ತೆಯಲ್ಲಿ 4 ಕಡೆ ಹಂಪ್ಸ್ ಅಳವಡಿಕೆ, ಕರಂಬಳ್ಳಿ ನೇಕಾರರ ಕಾಲೋನಿ ಬಸ್ ನಿಲ್ದಾಣದ ಬಳಿ ಹೊಸ ರಿಕ್ಷಾ ನಿಲ್ದಾಣಕ್ಕೆ ಅನುಮತಿ ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ, ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News