ದ್ವೇಷ ಭಾಷಣ ಆರೋಪ: ಫೇಸ್‌ಬುಕ್‌ನ ಉನ್ನತಾಧಿಕಾರಿಗೆ ದಿಲ್ಲಿ ವಿಧಾನಸಭಾ ಸಮಿತಿಯ ಬುಲಾವ್

Update: 2020-09-12 14:19 GMT

ಹೊಸದಿಲ್ಲಿ,ಸೆ.12: ಫೇಸ್‌ಬುಕ್ ದ್ವೇಷ ಭಾಷಣಗಳ ವಿರುದ್ಧ ಕ್ರಮ ಕೈಗೊಳ್ಳಲು ಉದ್ದೇಶಪೂರ್ವಕವಾಗಿ ನಿಷ್ಕ್ರಿಯವಾಗಿದೆ ಎಂಬ ದೂರುಗಳಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಾರ್ಟಿಯ ಶಾಸಕ ರಾಘವ ಛಡ್ಡಾ ನೇತೃತ್ವದ ದಿಲ್ಲಿ ವಿಧಾನ ಸಭೆಯ ಶಾಂತಿ ಮತ್ತು ಸೌಹಾರ್ದ ಸಮಿತಿಯು ಫೇಸ್‌ಬುಕ್ ಇಂಡಿಯಾದ ಉಪಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅಜಿತ ಮೋಹನ್ ಅವರಿಗೆ ಸೆ.15ರಂದು ತನ್ನೆದುರು ಹಾಜರಾಗುವಂತೆ ಸೂಚಿಸಿದೆ.

ದಿಲ್ಲಿ ದಂಗೆಗಳ ಒಳಸಂಚಿನಲ್ಲಿ ಮತ್ತು ಅದು ಉಲ್ಬಣಿಸುವಂತೆ ಮಾಡುವಲ್ಲಿ ಫೇಸ್ ಬುಕ್ ಶಾಮೀಲಾಗಿತ್ತು ಎಂದೂ ಈ ದೂರುಗಳಲ್ಲಿ ಆರೋಪಿಸಲಾಗಿದೆ.

ಲಭ್ಯ ಸಾಕ್ಷಗಳನ್ನು ಪರಿಗಣಿಸಿ ದಿಲ್ಲಿ ದಂಗೆಗಳ ತನಿಖೆಯಲ್ಲಿ ಫೇಸ್‌ಬುಕ್‌ನ್ನು ಸಹ ಆರೋಪಿಯನ್ನಾಗಿ ಸೇರಿಸಬೇಕು ಎಂದು ಸಮಿತಿಯು ಅಭಿಪ್ರಾಯವನ್ನು ಹೊಂದಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ. ಸೆ.15ರಂದು ಮಧ್ಯಾಹ್ನ 12 ಗಂಟೆಗೆ ಆರಂಭಗೊಳ್ಳುವ ಕಲಾಪವು ನೇರ ಪ್ರಸಾರವನ್ನು ಹೊಂದಿರುತ್ತದೆ ಎಂದು ಅದು ಹೇಳಿದೆ.

ಪತ್ರಕರ್ತರಾದ ಪರಂಜಯ ಗುಹಾ ಠಾಕುರ್ತಾ ಮತ್ತು ಕುನಾಲ್ ಪುರೋಹಿತ್, ಲೇಖಕ ನಿಖಿಲ್ ಪಹ್ವಾ ಮತ್ತು ಸಾಮಾಜಿಕ ಕಾರ್ಯಕರ್ತ ಆವೇಶ್ ತಿವಾರಿ ಸೇರಿದಂತೆ ಹಲವಾರು ಸಾಕ್ಷಿಗಳನ್ನು ಆಯೋಗವು ವಿಚಾರಣೆ ನಡೆಸಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಅಧ್ಯಕ್ಷತೆಯ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ದ್ವೇಷ ಭಾಷಣ ದೂರುಗಳಿಗೆ ಸಂಬಂಧಿಸಿದಂತೆ ಅಜಿತ್ ಮೋಹನ್ ಅವರನ್ನು ಇತ್ತೀಚಿಗೆ ಮೂರು ಗಂಟೆಗಳ ಕಾಲ ಪ್ರಶ್ನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News