ಬಿಹಾರ ಚುನಾವಣೆ: ಎನ್‌ಡಿಎಗೆ ತಲೆನೋವಾದ ಜೆಡಿಯು- ಎಲ್‌ಜೆಪಿ ಬಿಕ್ಕಟ್ಟು

Update: 2020-09-12 14:35 GMT

 ಹೊಸದಿಲ್ಲಿ,ಸೆ.12: ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಎನ್‌ಡಿಎ ಪಾಲುದಾರ ಜೆಡಿಯುದೊಂದಿಗಿನ ಬಿರುಕು ಇನ್ನಷ್ಟು ತೀವ್ರಗೊಳ್ಳುತ್ತಿರುವ ನಡುವೆಯೇ ಬಿಜೆಪಿಯ ಮಿತ್ರ,ಕೇಂದ್ರ ಸಚಿವ ಹಾಗೂ ಎಲ್‌ಜೆಪಿ ನಾಯಕ ರಾಮವಿಲಾಸ್ ಪಾಸ್ವಾನ್ ಅವರು ವಿಧಾನಸಭಾ ಚುನಾವಣೆಗಾಗಿ ಪಕ್ಷದ ಮೈತ್ರಿ ಮತ್ತು ಸೀಟ್‌ಗಳ ಹಂಚಿಕೆ ಬಗ್ಗೆ ತನ್ನ ಪುತ್ರ ಹಾಗೂ ಎಲ್‌ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ತಾನು ದೃಢವಾಗಿ ಬೆಂಬಲಿಸುವುದಾಗಿ ಹೇಳಿದ್ದಾರೆ.

ತಾನು ಅನಾರೋಗ್ಯಕ್ಕೀಡಾಗಿದ್ದು, ಅದಕ್ಕಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಸರಣಿ ಟ್ವೀಟ್‌ಗಳಲ್ಲಿ ಬಹಿರಂಗಗೊಳಿಸಿರುವ ಪಾಸ್ವಾನ್,ಕೊರೋನ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ತನ್ನ ಆರೋಗ್ಯ ಹದಗೆಡತೊಡಗಿತ್ತು,ಆದರೆ ಹುದ್ದೆಯ ಕಾರ್ಯಭಾರಗಳ ಒತ್ತಡದಿಂದಾಗಿ ಆಸ್ಪತ್ರೆಗೆ ಹೋಗಿರಲಿಲ್ಲ ಎಂದು ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ವಿರುದ್ಧ ಸ್ಪರ್ಧಿಸಬೇಕೇ ಎಂಬ ಬಗ್ಗೆ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವನ್ನು ಎಲ್‌ಜೆಪಿ ಚಿರಾಗ್ ಪಾಸ್ವಾನ್‌ಗೆ ನೀಡಿರುವ ಮತ್ತು 143 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಹಿರಿಯ ಪಾಸ್ವಾನ್‌ರ ಈ ಹೇಳಿಕೆ ಹೊರಬಿದ್ದಿದೆ.

ಕಳೆದ ಮಾರ್ಚ್‌ನಲ್ಲಿ ಚಿರಾಗ್ ‘ಬಿಹಾರ ಫಸ್ಟ್, ಬಿಹಾರಿ ಫಸ್ಟ್ ’ಅಭಿಯಾನವನ್ನು ಆರಂಭಿಸಿದ್ದನ್ನು ಜೆಡಿಯು ಸಂಶಯದ ದೃಷ್ಟಿಯಂದಲೇ ನೋಡಿತ್ತು ಮತ್ತು ಅಲ್ಲಿಂದೀಚಿಗೆ ಉಭಯ ಪಕ್ಷಗಳ ನಡುವಿನ ಸಂಬಂಧ ಹದಗೆಡುತ್ತಲೇ ಬಂದಿದೆ. ಮಾಜಿ ಮುಖ್ಯಮಂತ್ರಿ ಜಿತನ್ ರಾಮ ಮಾಂಝಿ ಅವರೊಂದಿಗೆ ಕೈಜೋಡಿಸಲು ನಿತೀಶ್ ಕುಮಾರ್ ನಿರ್ಧಾರವು ಜೆಡಿಯು-ಎಲ್‌ಜೆಪಿ ಸಂಬಂಧದಲ್ಲಿ ಇನ್ನಷ್ಟು ಹುಳಿಯನ್ನು ಹಿಂಡಿದೆ. ಮಾಂಝಿ ಎಲ್‌ಜೆಪಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ಇತಿಹಾಸವನ್ನು ಹೊಂದಿದ್ದಾರೆ.

ಚಿರಾಗ್ ನಿತೀಶ್ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದಾರಾದರೂ ಬಿಜೆಪಿ ವಿರುದ್ಧ ದಾಳಿಯಿಂದ ದೂರವುಳಿದಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನೂ ಹೊಗಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News