29 ವರ್ಷ ಹಿಂದಿನ ಪ್ರಕರಣದಲ್ಲಿ ಮಾಜಿ ಡಿಜಿಪಿ ವಿರುದ್ಧ ಬಂಧನದ ವಾರಂಟ್

Update: 2020-09-12 14:42 GMT

ಚಂಡಿಗಡ,ಸೆ.12: ಮೊಹಾಲಿಯ ನ್ಯಾಯಾಲಯವೊಂದು 1991ರಲ್ಲಿ ಚಂಢೀಗಡ ಕೈಗಾರಿಕಾ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ ಜೂನಿಯರ್ ಇಂಜಿನಿಯರ್ ಆಗಿದ್ದ ಬಲ್ವಂತ್ ಸಿಂಗ್ ಮುಲ್ತಾನಿ ಅವರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ರಾಜ್ಯದ ಮಾಜಿ ಡಿಜಿಪಿ ಸುಮೇಧ ಸಿಂಗ್ ಸೈನಿ ಅವರ ಬಂಧನಕ್ಕೆ ವಾರಂಟ್ ಹೊರಡಿಸಿದೆ. ಸೆ.25ರೊಳಗೆ ಸೈನಿಯವರನ್ನು ತನ್ನೆದುರು ಹಾಜರು ಪಡಿಸುವಂತೆ ಅದು ಪೊಲೀಸರಿಗೆ ಆದೇಶಿಸಿದೆ.

ಸೈನಿ ಬಂಧನಕ್ಕಾಗಿ ಪಂಜಾಬ ಪೊಲೀಸ್‌ನ ವಿಶೇಷ ತನಿಖಾ ತಂಡವು ಹಲವಾರು ಕಡೆಗಳಲ್ಲಿ ದಾಳಿ ನಡೆಸುತ್ತಿದೆಯಾದರೂ ಅವರು ಈವರೆಗೂ ಪೊಲೀಸರ ಬಲೆಗೆ ಬಿದ್ದಿಲ್ಲ. ಸೈನಿ ಎಲ್ಲಿದ್ದಾರೆಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಮುಲ್ತಾನಿ ನಾಪತ್ತೆಗೆ ಸಂಬಂಧಿಸಿದಂತೆ ಕಳೆದ ಮೇ ತಿಂಗಳಿನಲ್ಲಿ ಸೈನಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸೈನಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪಂಜಾಬ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿತ್ತು.

ಪ್ರಕರಣದಲ್ಲಿಯ ಎಫ್‌ಐಆರ್‌ನ್ನು ರದ್ದುಗೊಳಿಸುವಂತೆ ಅಥವಾ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವಂತೆ ಕೋರಿ ಸೈನಿ ಸಲ್ಲಿಸಿದ್ದ ಎರಡನೇ ಅರ್ಜಿಯನ್ನೂ ಉಚ್ಚ ನ್ಯಾಯಾಲಯವು ವಜಾಗೊಳಿಸಿತ್ತು.

ಮೊಹಾಲಿ ನ್ಯಾಯಾಲಯವು ಸೆ.1ರಂದು ಸೈನಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News