×
Ad

ಸೆ.21ರಿಂದ ಕಾಸರಗೋಡು-ಮಂಗಳೂರು ನಡುವೆ ಬಸ್ ಸಂಚಾರ ಆರಂಭ

Update: 2020-09-12 20:37 IST

ಮಂಗಳೂರು, ಸೆ.12: ಕಳೆದ ಸುಮಾರು ಆರು ತಿಂಗಳ ಬಳಿಕ ಕಾಸರಗೋಡು- ಮಂಗಳೂರು ನಡುವೆ ಅಂತಾರಾಜ್ಯ ಬಸ್ ಸಂಚಾರವನ್ನು ಸೆ.21ರಿಂದ ಆರಂಭಿಸಲು ಕಾಸರಗೋಡು ಜಿಲ್ಲಾಡಳಿತ ನಿರ್ಧರಿಸಿದೆ.

ದೇಶದಲ್ಲಿ ಕೊರೋನ ಸೋಂಕು ಪ್ರಮಾಣ ಏರಿಕೆಯಾಗುತ್ತಿದ್ದಂತೆ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಅಂದಿನಿಂದ ಕಾಸರಗೋಡು- ಮಂಗಳೂರು ನಡುವೆ ಬಸ್ ಸಂಚಾರ ನಿರ್ಬಂಧಿಸಲಾಗಿತ್ತು. ಇದೀಗ ಆರು ತಿಂಗಳ ಬಳಿಕ ಅಂತಾರಾಜ್ಯ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಎರಡೂ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಕೇರಳದಿಂದ ಮಂಗಳೂರಿಗೆ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಹೊರಟದ್ದು ಕಾಸರಗೋಡು ಜಿಲ್ಲಾಡಳಿತ. ಆದರೆ ಇತ್ತ ಕರ್ನಾಟಕ ಕೆಎಸ್ಸಾರ್ಟಿಸಿ ಈ ಬಗ್ಗೆ ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ಇನ್ನೂ ಹತ್ತು ದಿನಗಳ ಕಾಲಾವಕಾಶ ಇರುವುದರಿಂದ ಸಂಚಾರಕ್ಕೆ ಅನುಮತಿ ಸಿಗುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮಂಗಳೂರಿನಿಂದ ಕಾಸರಗೋಡಿಗೆ ಬಸ್ ಸಂಚಾರ ಆರಂಭಿಸಲು ಇನ್ನೂ ಅನುಮತಿ ಸಿಕ್ಕಿಲ್ಲ. ಈ ಬಗ್ಗೆ ಸೋಮವಾರ ಮೇಲಧಿಕಾರಿಗಳ ಬಳಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಸೆ.21ರಂದು ಸಂಚಾರ ಆರಂಭಿಸಲಿರುವ ಕೇರಳ ಬಸ್‌ನಲ್ಲಿ ತಲಾ 40 ಪ್ರಯಾಣಿಕರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಸಿಗಲಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಈ ಬಸ್‌ಗಳು ಸಂಚರಿಸಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಮೊದಲ ಹಂತದಲ್ಲಿ ಕಾಸರಗೋಡು- ಮಂಗಳೂರು, ಕಾಸರಗೋಡು- ಪಂಜಿಕಲ್ಲು ರೂಟ್‌ನಲ್ಲಿ ಮಾತ್ರವೇ ಬಸ್ ಸಂಚಾರ ನಡೆಸಲಿವೆ. ಬಸ್ ಸಂಚಾರದ ಆದೇಶ ಮತ್ತು ಮಾರ್ಗಸೂಚಿಯನ್ನು ಇನ್ನಷ್ಟೇ ಕೇರಳ ಸರಕಾರ ಬಿಡುಗಡೆಗೊಳಿಸಬೇಕಿದೆ.

ಲಾಕ್‌ಡೌನ್ ಅವಧಿಯಲ್ಲಿ ಉಭಯ ಜಿಲ್ಲೆಗಳು ತಮ್ಮ ಗಡಿಗಳನ್ನು ಬಂದ್‌ಗೊಳಿಸಿದ್ದವು. ಈ ನಡುವೆ ಎರಡೂ ಜಿಲ್ಲಾಡಳಿತಗಳ ನಡುವೆ ಸಂವಹನ ಕೊರತೆಯಿಂದ ಅನೇಕ ನಿರ್ಧಾರಗಳಲ್ಲಿ ವ್ಯತಿರಿಕ್ತತೆ ಕಂಡುಬಂದಿತ್ತು. ಇತ್ತೀಚೆಗೆ ನಾಲ್ಕು ಗಡಿ ರಸ್ತೆಗಳನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದ ಬಳಿಕ ಸಂಚಾರ ಸ್ವಲ್ಪ ಮಟ್ಟಿಗೆ ಮುಕ್ತವಾಗಿದೆ. ಆದರೆ ಕೆಎಸ್ಸಾರ್ಟಿಸಿ ಮಾತ್ರ ಸಂಚಾರ ಆರಂಭಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News