ಕೊರೋನಕ್ಕೆ ಔಷಧ ಸಿಗುವವರೆಗೆ ನಿರ್ಲಕ್ಷ್ಯ ಬೇಡ: ಪ್ರಧಾನಿ ಮೋದಿ

Update: 2020-09-12 15:45 GMT

ಹೊಸದಿಲ್ಲಿ, ಸೆ.12: ಕೊರೋನ ಸೋಂಕು ಹರಡದಂತೆ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಪುನರುಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೊರೋನ ಸೋಂಕಿಗೆ ಪರಿಣಾಮಕಾರಿ ಔಷಧ ಅಭಿವೃದ್ಧಿ ಪಡಿಸುವವರೆಗೆ ಈ ಬಗ್ಗೆ ಗರಿಷ್ಟ ಜಾಗ್ರತೆ ವಹಿಸಬೇಕು. ನಿರ್ಲಕ್ಷ್ಯ ಸಲ್ಲದು ಎಂದು ಹೇಳಿದ್ದಾರೆ.

ಜನತೆ ಕೊರೋನ ಸೋಂಕಿನ ಬಗ್ಗೆ ಜಾಗ್ರತೆ ವಹಿಸಬೇಕು. ಸುರಕ್ಷಿತ ಅಂತರ ಪಾಲನೆ ಮತ್ತು ಮಾಸ್ಕ್ ಧಾರಣೆಯನ್ನು ಮರೆಯಬಾರದು ಎಂದು ಪ್ರಧಾನಿ ಹೇಳಿದರು. ಮಧ್ಯಪ್ರದೇಶದ ಗ್ರಾಮೀಣ ಭಾಗದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾಗಿರುವ 1.75 ಲಕ್ಷ ಮನೆಗಳ ಗೃಹ ಪ್ರವೇಶ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

  ಭಾರತ್ ಬಯೋಟೆಕ್, ಸೆರಮ್ ಇನ್‌ಸ್ಟಿಟ್ಯೂಟ್, ಝೈದಸ್ ಕ್ಯಾಡಿಲ, ಪನಾಕಾ ಬಯೊಟೆಕ್, ಇಂಡಿಯನ್ ಇಮ್ಯೂನೊಲಾಜಿಕಲ್, ಮಿನ್‌ವಾಕ್ಸ್, ಬಯೊಲಾಜಿಕಲ್ ಇ ಸಹಿತ ಭಾರತದ ಕನಿಷ್ಟ 7 ಔಷಧ ತಯಾರಿಕಾ ಸಂಸ್ಥೆಗಳು ಕೊರೋನಕ್ಕೆ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

ಭಾರತ್ ಬಯೊಟೆಕ್ ಸಂಸ್ಥೆಯು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್)ನ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ದೇಶದಾದ್ಯಂತದ 12 ಸಂಸ್ಥೆಗಳಲ್ಲಿ ಪರೀಕ್ಷಿಸಲಾಗಿದೆ. ಈ ಲಸಿಕೆಯನ್ನು ಪ್ರಾಣಿಗಳ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿದ್ದು , ಪ್ರಥಮ ಹಂತದ ಪರೀಕ್ಷೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದನ್ನು ಗಮನಿಸಲಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News