ಪುತ್ತೂರು ತಾಲೂಕು ಕ್ರೀಡಾಂಗಣಕ್ಕೆ ಬಾಡಿಗೆ ದರ ಹೆಚ್ಚಳ : ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸಭೆ

Update: 2020-09-12 15:53 GMT

ಪುತ್ತೂರು : ಕೊಂಬೆಟ್ಟು ತಾಲೂಕು ಕ್ರೀಡಾಂಗಣದ ಸ್ಥಳ ಬಾಡಿಗೆ ಹಾಗೂ ಕಬಡ್ಡಿ ಮ್ಯಾಟ್ ಬಾಡಿಗೆ ದರವನ್ನು 2021 ಜ.1ಕ್ಕೆ ಅನ್ವಯ ಆಗುವಂತೆ ಹೆಚ್ಚಳಗೊಳಿಸಲು ತಾಲೂಕು ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ತಾ.ಪಂ.ಸಭಾಂಗಣದಲ್ಲಿ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ಶನಿವಾರ ತಾಲೂಕು ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸಭೆ ನಡೆದು ಈ ತೀರ್ಮಾನ ಕೈಗೊಳ್ಳಲಾಯಿತು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖಾಧಿಕಾರಿ ಎ.ಜಯರಾಮ ಗೌಡ ಅವರು ಕ್ರೀಡಾಂಗಣ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಬಾಡಿಗೆ ಶುಲ್ಕದಲ್ಲೇ ತಾಲೂಕು ಕ್ರೀಡಾಂಗಣಕ್ಕೆ ಸಂಬಂಧಿಸಿದ ಖರ್ಚು-ವೆಚ್ಚ ಭರಿಸುತ್ತಿರುವ ಹಿನ್ನೆಲೆಯಲ್ಲಿ ಆದಾಯ ಸಂಗ್ರಹಕ್ಕಾಗಿ ದಿನ ವೊಂದಕ್ಕೆ ಮೈದಾನದ ಬಾಡಿಗೆ ದರವನ್ನು ರೂ. 3000 ದಿಂದ ರೂ. 5000 ಸಾವಿರಕ್ಕೆ, ಸ್ವಚ್ಛತೆ ಶುಲ್ಕ ರೂ. 500 ವಿಧಿಸಲು ಹಾಗೂ ಕಬಡ್ಡಿ ಮ್ಯಾಟ್ ಅನ್ನು ಬಾಡಿಗೆಗೆ ಪಡೆದುಕೊಳ್ಳುವವರಿಗೆ ದಿನವೊಂದಕ್ಕೆ ರೂ. 5000 ಇದ್ದ ಶುಲ್ಕವನ್ನು ರೂ. 7500 ಹೆಚ್ಚಿಸಲು  ನಿರ್ಣಯಿಸಲಾಯಿತು.

ತಾಲೂಕು ಕ್ರೀಡಾಂಗಣದಲ್ಲಿರುವ ಸರಕಾರಿ ಜಿಮ್‍ಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಅಭ್ಯಾಸಕ್ಕಾಗಿ ಬರುತ್ತಿದ್ದು, ಶುಲ್ಕ ವಿಧಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ವಿದ್ಯಾರ್ಥಿಗಳಿಗೆ ಮಾಸಿಕ ರೂ. 100 ಹಾಗೂ  ಸಾರ್ವಜನಿಕರಿಗೆ ಮಾಸಿಕ ರೂ. 300 ಶುಲ್ಕ ವಿಧಿಸಲು ನಿರ್ಧರಿಸಲಾಯಿತು.

ಪ್ರತ್ಯೇಕ ಸುಸಜ್ಜಿತ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕಾಗಿ ಸ್ಥಳ ಗುರುತು ಪ್ರಕ್ರಿಯೆ ಬಗ್ಗೆ ಶಾಸಕರು ಕೇಳಿದ ಮಾಹಿತಿಗೆ ಉತ್ತರಿಸಿದ ಅಧಿಕಾರಿಯವರು ಕಂದಾಯ ಇಲಾಖೆ ಸೂಚಿಸಿದ ಮೂರು ಕಡೆ ಸ್ಥಳ ವೀಕ್ಷಿಸಿದ್ದು, ತೆಂಕಿಲದಲ್ಲಿ ಸೂಕ್ತವಾದ 24 ಎಕರೆ ಜಾಗವಿದೆ. ಅದು ಸೂಕ್ತವಾಗಿದ್ದು, ಅದರ ಬಳಕೆಯ ಬಗ್ಗೆ ಯೋಚನೆ ಮಾಡಬಹುದಾಗಿದೆ. ಈಗಿನ ಯೋಜನೆ ಪ್ರಕಾರ 10 ರಿಂದ 12 ಎಕರೆ ಜಾಗದ ಆವಶ್ಯಕತೆ ಇದೆ ಎಂದು ತಿಳಿಸಿದರು.

ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸದಸ್ಯೆ ಮೀನಾಕ್ಷಿ ಮಂಜುನಾಥ, ನಗರಸಭೆ ಸದಸ್ಯೆ ಜಗನ್ನಿವಾಸ ರಾವ್, ಅಭಿವೃದ್ಧಿ ಸಮಿತಿಯ ದೈಹಿಕ ಶಿಕ್ಷಣ ಶಿಕ್ಷಕ ವಸಂತ ಕುಮಾರ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಗನ್ನಾಥ ರೈ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News