ಅಣ್ಣಾ ಹಝಾರೆ ಹೋರಾಟ ಆರೆಸ್ಸೆಸ್ ಪ್ರಾಯೋಜಿತವಾಗಿತ್ತು: ಪ್ರಶಾಂತ್ ಭೂಷಣ್

Update: 2020-09-13 15:01 GMT

ಹೊಸದಿಲ್ಲಿ,ಸೆ.2: ಅಣ್ಣಾ ಹಝಾರೆ ಹಾಗೂ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದಿದ್ದ ಭ್ರಷ್ಟಾಚಾರ ವಿರೋಧಿ ಚಳವಳಿಗೆ ಆರೆಸ್ಸೆಸ್ ಬೆಂಬಲ ಹಾಗೂ ಉತ್ತೇಜನ ನೀಡಿತ್ತು ಎಂದು ಖ್ಯಾತ ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಬಹಿರಂಗಪಡಿಸಿದ್ದಾರೆ.

ಕೇಜ್ರಿವಾಲ್ ಅವರ ನೀತಿನಿಷ್ಠೆಗಳಿಲ್ಲದ ನಿರ್ಲಜ್ಜ ಪ್ರವೃತ್ತಿಯನ್ನು ತಿಳಿದುಕೊಳ್ಳಲು ತನಗೆ ಸಾಧ್ಯವಾಗದೆ ಹೋಗಿದ್ದುದು, ತನ್ನ ಜೀವನದ ಅತ್ಯಂತ ದೊಡ್ಡ ವಿಷಾದಕರ ಸಂಗತಿಗಳಲ್ಲೊಂದಾಗಿದೆ ಎಂದವರು ಹೇಳಿದ್ದಾರೆ.

‘ಇಂಡಿಯಾ ಟುಡೇ’ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಭ್ರಷ್ಟಾಚಾರದ ವಿರುದ್ಧ ಅಭಿಯಾನದಲ್ಲಿ ಪಾಲ್ಗೊಂಡಿದ್ದಕ್ಕಾಗಿ ನನಗೆ ಬೇಸರವಿಲ್ಲ. ಆದರೆ ಎರಡು ವಿಷಯಗಳಿಗಾಗಿ ನನಗೆ ಪಶ್ಚಾತ್ತಾಪವಾಗುತ್ತಿದೆ. ಒಂದನೆಯದಾಗಿ ಈ ಚಳವಳಿಯನ್ನು ಬಿಜೆಪಿ ಹಾಗೂ ಆರೆಸ್ಸೆಸ್ ದೊಡ್ಡ ಮಟ್ಟದಲ್ಲಿ ಬೆಂಬಲಿಸಿತ್ತು ಹಾಗೂ ಅದನ್ನು ಮುಂದಕ್ಕೊಯ್ದಿತ್ತು. ಕಾಂಗ್ರೆಸ್ ಸರಕಾರವನ್ನು ಅಧಿಕಾರದಿಂದ ಇಳಿಸುವ ಹಾಗೂ ತಾವು ಅಧಿಕಾರಕ್ಕೇರುವುದು ಅವುಗಳ ರಾಜಕೀಯ ಉದ್ದೇಶವಾಗಿತ್ತು’’ ಎಂದು ಅವರು ಹೇಳಿದ್ದಾರೆ.

ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಆರೆಸ್ಸೆಸ್‌ನ ಕಾಣದ ಕೈ ಇರುವ ಬಗ್ಗೆ ಬಹುಶಃ ಅಣ್ಣಾ ಹಝಾರೆ ಅವರಿಗೆ ತಿಳಿದಿರಲಾರದು. ಆದರೆ ಅರವಿಂದ್ ಕೇಜ್ರಿವಾಲ್ ಅವರಿಗೆ ಅದು ತಿಳಿದಿತ್ತು ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಅರವಿಂದ್ ಅವರ ನಡತೆಯ ಬಗ್ಗೆ ತನಗೆ ತಿಳಿಯಲು ಸಾಧ್ಯವಾಗದಿದ್ದುದು ತನಗಿರುವ ಇನ್ನೊಂದು ಬೇಸರವೆಂದು ಅವರು ಹೇಳಿದ್ದಾರೆ.

ಭ್ರಷ್ಟಾಚಾರ ವಿರೋಧಿ ಅಭಿಯಾನದ ಸಂದರ್ಭದಲ್ಲಿ ತನಗೆ ಕೇಜ್ರಿವಾಲ್ ಬಗ್ಗೆ ಅಪಾರವಾದ ಮೆಚ್ಚುಗೆಯಿತ್ತು. ಆದರೆ ಅವರ ಉದ್ದೇಶವು ನೀತಿನಿಷ್ಠೆಯಿಂದ ಕೂಡಿದೆಯೇ ಎಂಬುದನ್ನು ತಾನು ಆಗ ವಿಮರ್ಶಾತ್ಮಕ ದೃಷ್ಟಿಯಿಂದ ನೋಡಿರಲಿಲ್ಲವೆಂದು ಭೂಷಣ್ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಒಳಿತನ್ನು ಮಾಡಿದಾಗಲೆಲ್ಲಾ ತಾನು ಸದಾ ಅದನ್ನು ಶ್ಲಾಘಿಸುತ್ತಿದ್ದುದಾಗಿಯೂ ಪ್ರಶಾಂತ್ ಭೂಷಣ್ ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಶನಿವಾರ ಚಾರ್‌ಧಾಮ್ ಹೆದ್ದಾರಿಯ ಕುರಿತು ಸರ್ವೋಚ್ಚ ನ್ಯಾಯಾಲಯ ಅತ್ಯುತ್ತಮ ತೀರ್ಪನ್ನು ನೀಡಿದೆ ಎಂದರು. ಆದರೆ ಈಗಿನ ಆಡಳಿತ ವ್ಯವಸ್ಥೆಯು ಕೇವಲ ನಮ್ಮ ಪ್ರಜಾಪ್ರಭುತ್ವವನ್ನು ಮಾತ್ರವಲ್ಲ ನಮ್ಮ ನಾಗರಿಕತೆಯನ್ನು ಕೂಡಾ ನಾಶಪಡಿಸುತ್ತಿರುವಾಗ, ಖಂಡಿತವಾಗಿಯೂ ನಾನು ಆಡಳಿತದ ವಿರುದ್ಧ ದಾಳಿ ನಡೆಸಬೇಕಾಗುತ್ತದೆ ಎಂದರು.

ಪ್ರಶಾಂತ್ ಭೂಷಣ್ ಜೊತೆಗೆ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಅವರ ತಂದೆ ಶಾಂತಿ ಭೂಷಣ್ ಮಾತನಾಡಿ, ಈಗಿರುವುದು ಫ್ಯಾಶಿಸ್ಟ್ ಸರಕಾರವಾಗಿರುವುದರಿಂದ ನರೇಂದ್ರ ಮೋದಿಯವರನ್ನು ಎದುರು ಹಾಕಿಕೊಳ್ಳುವುದು ತುಂಬಾ ಕಠಿಣವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News