×
Ad

ಉಡುಪಿ: ಆತ್ಮನಿರ್ಭರ್ ಭಾರತ ಯೋಜನೆಯಡಿ ಗ್ರಾಮೀಣ ಯುವಕರಿಗೆ ತರಬೇತಿ

Update: 2020-09-13 21:01 IST

ಉಡುಪಿ, ಸೆ.13: ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವದ್ಯಾಲಯ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಮತ್ತು ಗ್ರಾಮ ವಿಕಾಸ ಸಮಿತಿ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಆತ್ಮನಿರ್ಭರ್ ಭಾರತ ಯೋಜನೆಯಡಿ ಗ್ರಾಮೀಣ ಯುವಕರಿಗೆ ಆರು ದಿನಗಳ ತರಬೇತಿಯ ಸಮಾರೋಪ ಸಮಾರಂಭ ಹಾಗೂ ಸಹ್ಯಾದ್ರಿ ತ್ರಿಶೂಲ್ (ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣ) ಉತ್ಪನ್ನದ ಅನಾವರಣ ಬ್ರಹ್ಮಾವರ ಕೃಷಿವಿಜ್ಞಾನ ಕೇಂದ್ರದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಮಂಜುನಾಥ ನಾಯಕ್, ಸಹ್ಯಾದ್ರಿ ತ್ರಿಶೂಲ್ ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣವನ್ನು ಅನಾವರಣಗೊಳಿಸಿ ಮಾತನಾಡಿ, ಲಾಕ್‌ಡೌನ್‌ನಿಂದ ಎಲ್ಲಾ ಕ್ಷೇತ್ರದಲ್ಲ್ಲಿ ಅಭಿವೃದ್ದಿ ಕುಂಠಿತವಾಗಿದೆ. ಆದರೆ ಕೃಷಿ ಕ್ಷೇತ್ರದಲ್ಲಿ ಮಾತ್ರ ಅಭಿವೃದ್ದಿ ಉನ್ನತ ಮಟ್ಟಕ್ಕೆ ತಲುಪಿದೆ. ಕೋವಿಡ್ ಪರಿಸ್ಥಿತಿಯಲ್ಲೂ ಕೂಡ ಆಹಾರ ವ್ಯವಸ್ಥೆ ಶೇ.10 ಜಾಸ್ತಿಯಾಗಿ ಧಾನ್ಯಗಳ ಪ್ರಮಾಣ ಶೇ.7ರಷ್ಟು ಹೆಚ್ಚಾಗಿದೆ ಎಂದರು.

ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣವಾದ ಸಹ್ಯಾದ್ರಿ ತ್ರಿಶೂಲ್, ಮಣ್ಣಿಗೆ ಬೇಕಾದ ಎಲ್ಲಾ ಪೋಷಕಾಂಶ ದೊರಕಿಸುವ ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣವಾಗಿದೆ. ಇದು ಸಸ್ಯಗಳನ್ನು ಪ್ರಚೋದಿಸುವ ಹಾಗೂ ರೋಗಗಳ ನಿರ್ವಹಣೆಯ ಕೆಲಸವನ್ನು ಮಾಡುತ್ತದೆ. ಸಾವಯವ ಕೃಷಿ, ಪರಂಪರಾಗತ ಕೃಷಿಯನ್ನು ಉಳಿಸ ಬೇಕಾದರೆ ರಾಸಾಯನಿಕ ಗೊಬ್ಬರಗಳ ಜೊತೆಗೆ ಈ ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣವನ್ನು ಉಪಯೋಗಿಸುವುದು ಒಳ್ಳೆಯದು. ಆತ್ಮನಿರ್ಭರ್ ಭಾರತ ಯೋಜನೆಯಡಿ ರೈತರು ಹೇಗೆ ಸ್ವಾವಲಂಬಿಗಳಾಗಿ ವ್ಯಾಪಾರಸ್ಥರಾಗಬೇಕು ಎಂದು ಡಾ.ನಾಯಕ್ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೃಷಿ ಮತ್ತು ತೋಟಗಾರಿಕೆ ವಿವಿಯ ವಿಸ್ತರಣಾ ನಿರ್ದೇಶಕ ಡಾ. ಶಶಿಧರ್ ಕೆ.ಸಿ. ಮಾತನಾಡಿ, ಕಡಿಮೆ ಖರ್ಚಿನಲ್ಲಿ ತಾವೇ ಸ್ವತಃ ಈ ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣ ತಯಾರಿಸುವಂತೆ ರೈತರಿಗೆ ಪ್ರೇರೇಪಿಸಿ, ಅದಕ್ಕೆ ಬೇಕಾದ ಎಲ್ಲಾ ತಂತ್ರಜ್ಞಾನ ಹಾಗೂ ತರಬೆೀತಿಯನ್ನು ವಿವಿ ನೀಡುತ್ತದೆ ಎಂದರು.

ಶಿವಮೊಗ್ಗ ಕೃಷಿ ವಿವಿ ಸಹವಿಸ್ತರಣಾ ನಿರ್ದೇಶಕ ಡಾ.ಎಸ್.ಯು. ಪಾಟೀಲ್, ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕಿ ಭುವನೇಶ್ವರಿ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಧನಂಜಯ ಬಿ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಮಣ ಮತ್ತು ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಬ್ರಹ್ಮಾವರದ ಪ್ರಾಂಶುಪಾಲ ಡಾ. ಸುಧೀರ್ ಕಾಮತ್ ಉಪಸ್ಥಿತರಿದ್ದರು.

ಬೇಸಾಯಶಾಸ್ತ್ರ ವಿಜ್ಞಾನಿ ಡಾ.ಎನ್.ಈ ನವೀನ್ ಕಾರ್ಯಕ್ರಮ ನಿರೂಪಿಸಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹೆಚ್ ಎಸ್. ಚೈತನ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News