ಕೊರೋನ ವಿರುದ್ಧ ಭಾರತದ ಸಮರದಲ್ಲಿ ಮೋದಿಯ ಪ್ರೇರಣೆಗಳು ನಿರ್ಣಾಯಕ: ಕೇಂಬ್ರಿಜ್ ವಿವಿ ಅಧ್ಯಯನ ವರದಿ

Update: 2020-09-13 16:35 GMT

 ಹೊಸದಿಲ್ಲಿ,ಸೆ.13: ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಗೆ ನೀಡಿದ ಪ್ರೇರಣೆಯು ಲಾಕ್‌ಡೌನ್ ಹಾಗೂ ಸುರಕ್ಷಿತ ಅಂತರದ ಕುರಿತು ಸಾಮೂಹಿಕ ಪರಿಣಾಮ ಬೀರುವಲ್ಲಿ ಪಾತ್ರ ವಹಿಸಿದೆಯೆಂದು ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಅಧ್ಯಯನ ವರದಿಯೊಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಲಾಕ್‌ಡೌನ್ ಸೇರಿದಂತೆ ಕೊರೋನ ವೈರಸ್ ಹಾವಳಿಯ ನಿಯಂತ್ರಣಕ್ಕೆ ವಿರುದ್ಧ ಭಾರತದ ವಿವಿಧ ಸರಕಾರಿ ಇಲಾಖೆಗಳು ಹೊಂದಿರುವ ನೀತಿ ಪ್ರಕ್ರಿಯೆಗಳಲ್ಲಿನ ಪ್ರಮುಖ ಪ್ರೇರಣಾತ್ಮಕ ಅಂಶಗಳನ್ನು ಗುರುತಿಸಲು ಈ ಅಧ್ಯಯನ ನಡೆಸಲಾಗಿತ್ತು.

 ಭಾರತವು ಒಂದು ವಿಶಾಲವಾದ ಹಾಗೂ ವೈವಿಧ್ಯಮಯವಾದ ದೇಶವಾಗಿದೆ. ಆದರೆ ದುರ್ಗಮ ಪ್ರದೇಶದ ಮನೆಗಳಿಗೂ ಡಿಜಿಟಲೀಕರಣವು ತಲುಪಿರುವಂತಹ ಪಾಶ್ಚಾತ್ಯ ಜಗತ್ತಿನಲ್ಲಿ ಕೊರೋನ ನಿಯಂತ್ರಣವು ಭಾರತಕ್ಕೆ ಹೋಲಿಸಿದರೆ ತುಂಬಾ ಸುಲಭವಾಗಿದೆ. ಆದರೆ ಭಾರತದಲ್ಲಿ ಡಿಜಿಟಲೀಕರಣವು ಇನ್ನೂ ಶೈಶವಾಸ್ಥೆಯಲ್ಲಿದೆ ಎಂದು ಅಧ್ಯಯನದ ಸಹ ಲೇಖಕರಾದ ಹಾಗೂ ಕೇಂಬ್ರಿಜ್ ವಿವಿಯ ಸಹಾಯಕ ಪ್ರೊಫೆಸರ್ ರೋನಿಟಾ ಭೂಷಣ್ ತಿಳಿಸಿದ್ದಾರೆ.

   ಪ್ರಧಾನಿ ನರೇಂದ್ರ ಮೋದಿ ನೀಡಿದ ಪ್ರೇರಣೆಯು, ಕೊರೋನ ಸೋಂಕಿನ ಹಾವಳಿಯನ್ನು ಎದುರಿಸಲು ದೇಶದ ಸನ್ನದ್ಧತೆ, ಕಾರ್ಯಾಚರಣೆ ಹಾಗೂ ಕಾರ್ಯತಂತ್ರಗಳನ್ನು ರೂಪಿಸಲು ನೆರವಾಯಿತು ಎಂದು ಅಧ್ಯಯನವು ಗಮನಸೆಳೆದಿದೆ. ಕೊರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿಯವರು ಆಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದುದು, ದೇಶದ 130 ಕೋಟಿ ಜನರನ್ನು ಕಟ್ಟುನಿಟ್ಟಿನ ಲಾಕ್‌ಡೌನ್ ಹಾಗೂ ಸುರಕ್ಷಿತ ಅಂತರದ ಕ್ರಮಗಳನ್ನು ಪಾಲಿಸುವಲ್ಲಿ ಜನರಿಗೆ ಪ್ರೇರಕವಾಯಿತೆಂದು ವರದಿ ಹೇಳಿದೆ.

ವ್ಯಾಪಕವಾದ ಮಾಧ್ಯಮ ಪ್ರಚಾರಗಳು ಹಾಗೂ ಮೋದಿಯವರ ಸಾರ್ವಜನಿಕವಾಗಿ ನೀಡಿದ ಭರವಸೆದಾಯಕವಾದ ಭಾಷಣಗಳು, ಫಾರ್ಮಾ, ಆರ್ಥಿಕತೆ, ಆರೋಗ ಹಾಗೂ ಸಾರ್ವಜನಿಕ ಸುರಕ್ಷಿತ ವಲಯಗಳಲ್ಲಿ ಸಾಮೂಹಿಕ ಪರಿಣಾಮವನ್ನು ಬೀರಿತೆಂದು ರಾಮಿತ್ ದೇಬ್‌ನಾಥ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News