ಯುಎಸ್ ಓಪನ್: ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಡೊಮಿನಿಕ್ ಥೀಮ್

Update: 2020-09-14 03:53 GMT
Photo: US Open Twitter

ನ್ಯೂಯಾರ್ಕ್: ಐತಿಹಾಸಿಕ ಪ್ರತಿಹೋರಾಟ ತೋರಿದ ಡೊಮಿನಿಕ್ ಥೀಮ್ ಅವರು ಅಲೆಗ್ಸಾಂಡರ್ ಝೆರೆವ್ ಅವರನ್ನು ಐದು ಸೆಟ್‍ಗಳ ಮ್ಯಾರಥಾನ್ ಹೋರಾಟದಲ್ಲಿ ಮಣಿಸಿ ಯುಎಸ್ ಓಪನ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.

ನಿರ್ಜನ ಆರ್ಥರ್ ಆ್ಯಷ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಫೈನಲ್ಸ್ ನಲ್ಲಿ ನಾಲ್ಕು ಗಂಟೆ ಎರಡು ನಿಮಿಷಗಳ ಸುದೀರ್ಘ ಹೋರಾಟದಲ್ಲಿ ಎರಡನೇ ಶ್ರೇಯಾಂಕದ ಆಸ್ಟ್ರೇಲಿಯಾ ಆಟಗಾರ ಐದನೇ ಶ್ರೇಯಾಂಕದ ಝೆರೆವ್ ಅವರನ್ನು 2-6, 4-6, 6-4, 6-3, 7-6 (8/6) ಸಟ್‍ಗಳಿಂದ ಮಣಿಸಿ ಟ್ರೋಫಿಗೆ ಮುತ್ತಿಕ್ಕಿದರು. ಫೈನಲ್ ಪಂದ್ಯ ಟೈಬ್ರೇಕರ್ ನಲ್ಲಿ ಅಂತ್ಯಗೊಂಡದ್ದು ಕೂಡಾ ಇದೇ ಮೊದಲು.

ಮೊದಲ ಎರಡು ಸೆಟ್‍ಗಳನ್ನು ಸೋತರೂ, ಪ್ರತಿಹೋರಾಟ ತೋರಿ ಪ್ರಶಸ್ತಿ ಗೆದ್ದ ನಿದರ್ಶನ ಅಮೆರಿಕನ್ ಓಪನ್ ಇತಿಹಾಸದಲ್ಲೇ ಮೊದಲು. ಇದು ಥೀಮ್ ಅವರಿಗೆ ವೃತ್ತಿಜೀವನದ ಚೊಚ್ಚಲ ಗ್ರ್ಯಾಂಡ್‍ಸ್ಲಾಂ ಪ್ರಶಸ್ತಿಯಾಗಿದೆ.

"ಇಂದು ಇಬ್ಬರು ವಿಜೇತರಾಗಬೇಕಿತ್ತು ಎನ್ನುವುದು ನನ್ನ ಆಶಯ. ನಾವಿಬ್ಬರೂ ಜಯಕ್ಕೆ ಅರ್ಹರಾಗಿದ್ದೆವು" ಎಂದು ಥೀಮ್ ನುಡಿದರು. ಗ್ರ್ಯಾಂಡ್‍ಸ್ಲಾಂ ಫೈನಲ್‍ಗಳಲ್ಲಿ ಮೂರು ಬಾರಿ ಎಡವಿದ್ದ 27 ವರ್ಷದ ಥೀಮ್, ಈ ವರ್ಷದ ಆಸ್ಟ್ರೇಲಿಯನ್ ಓಪನ್, 2018 ಮತ್ತು 2019ರ ಫ್ರೆಂಚ್ ಓಪನ್ ಟೂರ್ನಿಗಳಲ್ಲಿ ರನ್ನರ್ಸ್ ಪಟ್ಟಕ್ಕೆ ತೃಪ್ತಿಪಟ್ಟುಕೊಂಡಿದ್ದರು. 2014ರಲ್ಲಿ ಕ್ರೊವೇಷಿಯಾದ ಮರಿನ್ ಸಿಲಿಕ್ ಅವರು ಪ್ರಶಸ್ತಿ ಗೆದ್ದ ಬಳಿಕ ಫ್ಲಶಿಂಗ್ ಮೆಡೋಸ್‍ನಲ್ಲಿ ಚೊಚ್ಚಲ ಗ್ರ್ಯಾಂಡ್‍ಸ್ಲಾಂ ಗೆದ್ದ ಮೊದಲ ಆಟಗಾರ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News