ಬ್ಯಾಡ್ಮಿಂಟನ್‌ಗೆ ತಟ್ಟಿದ ಶಟಲ್‌ಗಳ ಬರ

Update: 2020-09-14 04:08 GMT

ಬೆಂಗಳೂರು, ಸೆ.13: ಲಾಕ್‌ಡೌನ್ ನಂತರ ದೇಶದಲ್ಲಿ ಕ್ರೀಡೆಯು ನಿಧಾನವಾಗಿ ಚೇತರಿಕೆಯ ಲಕ್ಷಣ ಕಾಣುತ್ತಿದ್ದಂತೆಯೇ, ಬ್ಯಾಡ್ಮಿಂಟನ್‌ಗೆ ಶಟಲ್‌ಗಳ ತೀವ್ರ ಕೊರತೆಯ ಬಿಸಿ ತಟ್ಟಿದೆ.ರಾಷ್ಟ್ರೀಯ ಶಿಬಿರಾರ್ಥಿಗಳು ಸೇರಿದಂತೆ ದೇಶದ ಬಹುಪಾಲು ಆಟಗಾರರು ಬಳಸುವ ಯೋನೆಕ್ಸ್ ಶಟಲ್‌ಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಜುಲೈನಿಂದ ಈ ಕೊರತೆ ಕಂಡು ಬಂದಿದೆ.

ಚೀನಾದಿಂದ ಶಟಲ್‌ಗಳ ಆಮದಿಗೆ ಕೇಂದ್ರ ಸರ್ಕಾರ ನಿಷೇಧ ವಿಧಿಸಿದ ಕಾರಣದಿಂದಾಗಿ ಶಟಲ್‌ಗಳ ಕೊರತೆ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.

ವಿಶ್ವದಲ್ಲಿ ಶೇ. 90 ಕ್ಕಿಂತಲೂ ಹೆಚ್ಚು ಶಟಲ್‌ಗಳನ್ನು ಚೀನಾದಲ್ಲಿ ತಯಾರಿಸಲಾಗುತ್ತದೆ. ಕಚ್ಚಾ ವಸ್ತುಗಳ ತಯಾರಿಕೆ ಆ ದೇಶದಲ್ಲಿ ಇದೇ ಪ್ರಮಾಣದಲ್ಲಿ ನಡೆಯುತ್ತದೆ. ಇದೊಂದು ಏಕಸ್ವಾಮ್ಯವಾಗಿದೆ.

ರಾಷ್ಟ್ರೀಯ ಬ್ಯಾಡ್ಮಿಂಟನ್ ತರಬೇತುದಾರ ಪಿ. ಗೋಪಿಚಂದ್ ಅವರು ಕೊರತೆಯನ್ನು ಒಪ್ಪಿಕೊಂಡಿದ್ದಾರೆ. ಈ ಬಿಕ್ಕಟ್ಟನ್ನು ಪರಿಹರಿಸದಿದ್ದರೆ ರಾಷ್ಟ್ರೀಯ ಶಿಬಿರದಲ್ಲಿ ಅಭ್ಯಾಕ್ಕೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

‘‘ನಾವು ಥಾಮಸ್ ಮತ್ತು ಉಬರ್ ಕಪ್ ತಯಾರಿ ಶಿಬಿರಕ್ಕೆ ಶಟಲ್ ಪಡೆದಿಲ್ಲ ಮತ್ತು ನಮ್ಮಲ್ಲಿರುವ ಸ್ಟಾಕ್‌ಗಳನ್ನು ಬಳಸುತ್ತಿದ್ದೇವೆ. ನಾವು ಶೀಘ್ರದಲ್ಲೇ ಶಟಲ್‌ಗಳನ್ನು ಪಡೆಯದಿದ್ದರೆ, ಅದು ತರಬೇತಿಯ ಮೇಲೆ ಪರಿಣಾಮ ಬೀರಲಿದೆ ’’ಎಂದು ಗೋಪಿಚಂದ್ ಹೇಳಿದರು.

ಅಕಾಡಮಿಗಳು ಮತ್ತು ತರಬೇತಿ ಕೇಂದ್ರಗಳು ಹಳೆಯ ಸ್ಟಾಕ್‌ನ್ನು ನ್ಯಾಯಯುತವಾಗಿ ಬಳಸುತ್ತಿವೆ ಅಥವಾ ಸಾಗರೋತ್ತರ ಸ್ನೇಹಿತರಿಂದ ಸಣ್ಣ ಪ್ರಮಾಣದಲ್ಲಿ ಶಟಲ್ ಪಡೆಯುತ್ತಿವೆ. ಅನೇಕ ತರಬೇತಿ ಕೇಂದ್ರಗಳಲ್ಲಿ ಆಟಗಾರರ ಕನಿಷ್ಠ ಹಾಜರಾತಿಯು ಶಟಲ್‌ಗಳ ಬಳಕೆಯನ್ನು ಕಡಿತಗೊಳಿಸಲು ಸಹಕಾರಿಯಾಗಿದೆ .

‘‘ನಾವು ಅಕಾಡಮಿಯಲ್ಲಿ ಪೂರ್ಣ ಬಲಕ್ಕೆ ಮರಳಿದ್ದೇವೆ ಮತ್ತು ತರಬೇತಿ ಪೂರ್ಣ ಪ್ರಗತಿಯಲ್ಲಿದೆ. ನಮಗೆ ೆ ಶಟಲ್‌ಗಳು ಲಭ್ಯವಿರುವುದಿಲ್ಲ. ಇದು ದುಃಖಕರ ಮತ್ತು ಆತಂಕಕಾರಿ. ಶೀಘ್ರದಲ್ಲೇ ಪರಿಹಾರವನ್ನು ಕಂಡುಹಿಡಿಯಬೇಕಾಗಿದೆ ಎಂದು ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡಮಿಯ ಸಹ-ಸಂಸ್ಥಾಪಕ ಮತ್ತು ಮುಖ್ಯ ತರಬೇತುದಾರ ಯು.ವಿಮಲ್ ಕುಮಾರ್ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News