ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರಕಾರದಿಂದ ಅನ್ಯಾಯ: ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್

Update: 2020-09-14 13:33 GMT

ಬೆಂಗಳೂರು, ಸೆ.14: ಈ ವರ್ಷವೂ ಅನುದಾನ ನೀಡಿಕೆಯಲ್ಲಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಭಾರೀ ಅನ್ಯಾಯವಾಗಿದೆ ಎಂದು ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಆರೋಪಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯಗಳಿಗೆ 6,195 ರೂ. ಕೊಟ್ಟ ಕೇಂದ್ರ ಸರಕಾರ, ಕರ್ನಾಟಕಕ್ಕೆ ಬಿಡಿಗಾಸನ್ನೂ ಕೊಟ್ಟಿಲ್ಲ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಸಾಲ ತರಲು ಮುಂದಾಗಿರುವ ನೀವು, ಮೋಸ ಮಾಡಿರುವ ಕೇಂದ್ರವನ್ನು ಯಾಕೆ ಪ್ರಶ್ನೆ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ನೆರೆ ಸಮಸ್ಯೆ ಸಂದರ್ಭವೂ ಕೇಂದ್ರ ಸರಕಾರ ಅತಿ ಕಡಿಮೆ ಮೊತ್ತದ ಪರಿಹಾರ ನೀಡಿ ಕೈತೊಳೆದುಕೊಂಡಿತ್ತು. ಇದನ್ನು ರಾಜ್ಯ ಸರಕಾರ ಪ್ರಶ್ನಿಸಿರಲಿಲ್ಲ. ಹೆಚ್ಚಿನ ಮೊತ್ತ ನೀಡುವಂತೆ ಮನವಿ, ಇಲ್ಲವೇ ಒತ್ತಡ ಹೇರುವ ಕಾರ್ಯ ಮಾಡಿರಲಿಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡ ಕೇಂದ್ರ ಸರಕಾರ, ಈ ಸಾರಿಯೂ ರಾಜ್ಯದ ಮೇಲಿನ ತನ್ನ ನಿರ್ಲಕ್ಷ್ಯ ಮುಂದುವರಿಸಿದೆ.

ರಾಜ್ಯದಿಂದ 25 ಬಿಜೆಪಿ ಸಂಸದರನ್ನ ಆಯ್ಕೆ ಮಾಡಿ ಜನ ಕಳುಹಿಸಿಕೊಟ್ಟಿದ್ದಾರೆ. ಆದರೂ ಇಂಥದೊಂದು ತಾರತಮ್ಯ ಕರ್ನಾಟಕದ ಬಗ್ಗೆ ಕೇಂದ್ರ ಸರಕಾರಕ್ಕೆ ಏಕಿದೆ. ಇಲ್ಲಿನ ಸಮಸ್ಯೆಯನ್ನು ಸಮರ್ಥವಾಗಿ ಮನದಟ್ಟು ಮಾಡುವ ಕಾರ್ಯವನ್ನು ರಾಜ್ಯ ಸರಕಾರವಾಗಲಿ ಅಥವಾ ರಾಜ್ಯದಿಂದ ಆಯ್ಕೆಯಾದ ಸಂಸದರಾಗಲಿ ಮಾಡುತ್ತಿಲ್ಲ. ಇದು ರಾಜ್ಯದ ಬಗ್ಗೆ ಕೇಂದ್ರ ಇನ್ನಷ್ಟು ತಾತ್ಸಾರ ಹಾಗೂ ನಿರ್ಲಕ್ಷ ತೋರಿಸಲು ಕಾರಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News