×
Ad

ದೇಶದ ಬೆಳವಣಿಗೆಯಲ್ಲಿ ಏಕಭಾಷೆಯಾದ ಹಿಂದಿ ಪ್ರಮುಖ ಪಾತ್ರ ವಹಿಸಿದೆ: ಡಾ.ಗೀತಾ ತಳವಾರ್

Update: 2020-09-14 19:17 IST

ಕಾರವಾರ: ಹಿಂದಿ ಭಾಷೆ ಸರಳ ಭಾಷೆಯಾಗಿದೆ. ಇದನ್ನು ಕಲಿಯುವುದು ಹಾಗೂ ಮಾತನಾಡುವುದು ಬಹಳ ಸುಲಭ ಎಂದು ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಗೀತಾ ತಳವಾರ್ ಹೇಳಿದರು.

ಅವರು ಕಾರವಾರದ ಆಝಾದ್ ಯುಥ್ ಕ್ಲಬ್ ಹಾಗೂ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಹಿಂದಿ ದಿನಾಚರಣೆಯ ನಿಮಿತ್ತ ಶಿವಾಜಿ ಬಿ.ಎಡ್. ಕಾಲೇಜ್ ಬಾಡದಲ್ಲಿ ಪ್ರಾಶಿಕ್ಷಣಾರ್ಥಿಗಳಿಗಾಗಿ ಆನ್‍ಲೈನ್ ಮೂಲಕ ಹಮ್ಮಿಕೊಂಡ ಹಿಂದಿಯಲ್ಲಿಯೇ ಭಾಷಣ ಹಾಗೂ ದೇಶಭಕ್ತಿಗೀತೆಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು. 

ಇದು ರಾಷ್ಟ್ರ ಭಾಷೆಯಾಗಿರುವುದರಿಂದ ದೇಶದ ಯಾವ ಮೂಲೆಯಲ್ಲಾದರೂ ಸಂಚರಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಲೇಜುಗಳಲ್ಲಿ ಮಕ್ಕಳು ಹಿಂದಿಯನ್ನು ಸಂಪರ್ಕಭಾಷೆಯಾಗಿ ಬೆಳೆಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ದೇಶದ ಬೆಳವಣಿಗೆಗೆ ಏಕಭಾಷೆಯ ಅವಶ್ಯಕತೆ ಇದೆ. ಆ ಭಾಷೆ ಹಿಂದಿ ಭಾಷೆಯಾಗಿದೆ. ಅದನ್ನು ನಾವೆಲ್ಲರೂ ಪ್ರೀತಿಸಿ, ಗೌರವಿಸುವುದರ ಜೊತೆಗೆ ಜೀವನದಲ್ಲಿ ಬೆಳೆಸಿಕೊಂಡು ಹೋಗೋಣ ಎಂದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕ ಆರ್. ಜಿ. ಪ್ರಭು ಮಾತನಾಡಿ ರಾಜ್ಯ ರಾಜ್ಯಗಳ ಸೇತುವೆಯಾಗಿ ಹಿಂದಿ ಭಾಷೆಯು ಕೆಲಸ ಮಾಡುತ್ತಿದೆ. ಆದ್ದರಿಂದ ಹಿಂದಿ ಭಾಷೆಗೆ ಪ್ರಾಮುಖ್ಯತೆಯನ್ನು ಕೊಡಬೇಕು. ಎಲ್ಲಾ ಭಾಷೆಗಳನ್ನು ಪ್ರೀತಿಸಿ ಹಿಂದಿಯನ್ನು ರಕ್ಷಿಸಿ ಎಂದು ಹೇಳಿದರು. 

ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಇಬ್ರಾಹಿಂ ಕಲ್ಲೂರ್ ಮಾತನಾಡಿ, ಹಿಂದಿ ಭಾಷೆಯಲ್ಲಿ ಕಲಿತದ್ದು ಎಂದೆಂದಿಗೂ ನೆನಪಿರುತ್ತದೆ. ಆ ಭಾಷೆಯಲ್ಲಿ ಒಂದು ರೀತಿಯ ಪ್ರೀತಿ ಅಡಗಿದೆ. ಈ ಪ್ರೀತಿಯ ಭಾಷೆಯನ್ನು ನಾವು ಎಲ್ಲಾ ಕಡೆ ಹರಡಬೇಕಾಗಿದೆ ಎಂದು ಹೇಳಿದರು.

ಕ.ಸಾ.ಪ.ಸದಸ್ಯೆ ಫೈರೋಜಾ ಬೇಗಂ ಮಾತನಾಡಿ ಹಿಂದಿ ಭಾಷೆಯನ್ನು ಅರಿತವರು ದೇಶದ ಯಾವ ಮೂಲೆಯಲ್ಲಾದರೂ ನಿರ್ಭೀತಿಯಿಂದ ಸಂಚರಿಸಬಹುದು. ಇದೊಂದು ಸಂಪರ್ಕ ಭಾಷೆಯಾಗಿ ಪ್ರಾಮುಖ್ಯತೆಯನ್ನು ಪಡೆದಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶಿವಾನಂದ ನಾಯಕ ಮಾತನಾಡಿ, ಹಿಂದಿ ಭಾಷೆಯು ಭಾವನಾತ್ಮಕ ಸಂಬಂಧವನ್ನು ಏರ್ಪಡಿಸಿದೆ. ಭಾರತವು ಬಹು ಸಂಸ್ಕೃತಿಯ ದೇಶವಾಗಿದೆ. ಈ ವೈವಿದ್ಯಮಯ ಸಂಸೃತಿಯನ್ನು ಒಂದುಗೂಡಿಸುವ ಭಾಷೆ ಹಿಂದಿ ಭಾಷೆಯಾಗಿದೆ. ಕೋವಿಡ್ 19ರ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಸರಳವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಚರಿಸಲಾಗಿದೆ ಎಂದರು.

ಈ ಕಾರ್ಯಕ್ರಮವನ್ನು ಕ್ಲಬ್‍ನ ಕಾರ್ಯದರ್ಶಿ ಮುಹಮ್ಮದ್ ಉಸ್ಮಾನ್ ಶೇಖ್ ಸಂಘಟಿಸಿದ್ದರು. ಉಪನ್ಯಾಸಕ ರಾಜೇಶ ಬಂಟ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಪ್ರಾಶಿಕ್ಷಣಾರ್ಥಿ ಅನಿಸಾ ಶೇಖ್ ವಂದಿಸಿದರು. ಐಶ್ವರ್ಯ ರಾಯ್ಕರ್ ಮತ್ತು ಆಶಾ ಹೆಚ್.ಕಾರ್ಯಕ್ರಮವನ್ನು ನಿರೂಪಿಸಿದರು. 

ಕ್ಲಬ್‍ನ ಅಧ್ಯಕ್ಷ ಮುಹಮ್ಮದ್ ಅಸೀಫ್ ಶೇಖ್, ಉಪನ್ಯಾಸಕರಾದ ನಯನಾ ನಾಯ್ಕ, ಡಾ. ಶ್ರೀಕುಮಾರ್ ನಾಯಕ, ಡಾ.ಮಾಧವಿ ಗಾಂವ್‍ಕಾರ್, ಡಾ.ನವೀನ್ ದೇವರ್ ಭಾವಿ, ಶಂಕರ್ ಚಾಪೋಲೇಕರ್ ಮತ್ತಿತರರು ಉಪಸ್ಥಿತರಿದ್ದರು.  ಪ್ರಾಶಿಕ್ಷಣಾರ್ಥಿಗಳಿಗೆ ಆನ್‍ಲೈನ್ ಮೂಲಕ ಹಮ್ಮಿಕೊಂಡ ಕೋವಿಡ್ 19 ವಿಷಯದ ಕುರಿತ ಭಾಷಣ ಸ್ಪರ್ಧೆಯಲ್ಲಿ ನಮೃತ ಬಿ. ಪ್ರಥಮ, ಜಾಮಣ್ಣ ದ್ವಿತೀಯ, ಮತ್ತು ಯಾಸ್ಮೀನ್ ತೃತೀಯ ಹಾಗೂ ದೇಶ ಭಕ್ತಿ ಗೀತೆ ಸ್ಪರ್ಧೆಯಲ್ಲಿ ಆಶಾ ಹೆಚ್.ಪ್ರಥಮ, ಐಶ್ವರ್ಯ ರಾಯ್ಕರ್ ದ್ವಿತೀಯ ಹಾಗೂ ವಿನುತ ಮಡಿವಾಳ ತೃತೀಯ ಬಹುಮಾನಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News