ನಮ್ಮ ಕಾನೂನುಗಳು, ಮೌಲ್ಯಗಳಲ್ಲಿ ಸಲಿಂಗ ವಿವಾಹಗಳಿಗೆ ಮಾನ್ಯತೆಯಿಲ್ಲ: ದಿಲ್ಲಿ ಹೈಕೋರ್ಟ್‌ ಗೆ ಕೇಂದ್ರದ ಹೇಳಿಕೆ

Update: 2020-09-14 13:59 GMT

ಹೊಸದಿಲ್ಲಿ,ಸೆ.14: ಸಲಿಂಗ ವಿವಾಹಗಳನ್ನು ನಮ್ಮ ಕಾನೂನುಗಳು, ಕಾನೂನು ವ್ಯವಸ್ಥೆ, ಸಮಾಜ ಮತ್ತು ಮೌಲ್ಯಗಳು ಒಪ್ಪಿಕೊಳ್ಳುವುದಿಲ್ಲ, ಹೀಗಾಗಿ ಅವುಗಳನ್ನು ಅನುಮತಿಸಲಾಗುವುದಿಲ್ಲ ಎಂದು ಕೇಂದ್ರವು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಹಿಂದು ವಿವಾಹ ಕಾಯ್ದೆ ಮತ್ತು ವಿಶೇಷ ವಿವಾಹ ಕಾಯ್ದೆಗಳಡಿ ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಬೇಕು ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯ ವಿಚಾರಣೆ ಸಂದರ್ಭ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ನೇತೃತ್ವದ ಪೀಠದ ಮುಂದೆ ಈ ಹೇಳಿಕೆಯನ್ನು ನೀಡಿದರು.

ಅರ್ಜಿಯಲ್ಲಿಯ ಕೋರಿಕೆಯನ್ನು ವಿರೋಧಿಸಿದ ಮೆಹ್ತಾ, ಸಲಿಂಗಿಗಳ ನಡುವಿನ ಸಂಸ್ಕಾರಯುತವಲ್ಲದ ವಿವಾಹವನ್ನು ನಮ್ಮ ಕಾನೂನುಗಳು, ಸಮಾಜ ಒಪ್ಪುವುದಿಲ್ಲ ಎಂದು ಹೇಳಿದರು.

ಸಲಿಂಗ ವಿವಾಹಗಳಿಗೆ ಮಾನ್ಯತೆ ಅಥವಾ ನೋಂದಣಿಗೆ ಅನುಮತಿ ಕೋರಿರುವ ಅರ್ಜಿಯು ಎರಡು ಕಾರಣಗಳಿಂದ ಸ್ವೀಕಾರಾರ್ಹವಲ್ಲ. ಶಾಸನವನ್ನು ರೂಪಿಸುವಂತೆ ಅರ್ಜಿಯು ನ್ಯಾಯಾಲಯಕ್ಕೆ ಕೋರಿಕೊಂಡಿರುವುದು ಮೊದಲ ಕಾರಣವಾಗಿದ್ದರೆ,ಕೋರಿಕೆಯನ್ನು ಈಡೇರಿಸಿದರೆ ಅದು ವಿವಿಧ ಕಾನೂನುಗಳಿಗೆ ವಿರುದ್ಧವಾಗುತ್ತದೆ ಎನ್ನುವುದು ಎರಡನೆಯ ಕಾರಣವಾಗಿದೆ ಎಂದು ಮೆಹ್ತಾ ತಿಳಿಸಿದರು.

ಹಿಂದು ವಿವಾಹ ಕಾಯ್ದೆಯಡಿ ಗಂಡ ಮತ್ತು ಹೆಂಡತಿಯ ಪಾತ್ರವನ್ನು ನಿರೂಪಿಸಲಾಗಿದೆ. ಸಲಿಂಗ ವಿವಾಹದಲ್ಲಿ ಯಾರು ಗಂಡ, ಯಾರು ಹೆಂಡತಿ ಎನ್ನುವುದನ್ನು ನಿರ್ಧರಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದರು.

ಸಲಿಂಗ ವಿವಾಹ ಬಯಸುವವರು ವಿದ್ಯಾವಂತರಾಗಿದ್ದಾರೆ ಮತ್ತು ನೇರವಾಗಿ ನ್ಯಾಯಾಲಯವನ್ನು ಸಂಪರ್ಕಿಸಬಹುದು. ಹೀಗೀರುವಾಗ ನಾವೇಕೆ ಈ ಪಿಐಎಲ್‌ನ್ನು ವಿಚಾರಣೆಗೆ ಅಂಗೀಕರಿಸಬೇಕು ಎಂಬ ನ್ಯಾಯಾಲಯದ ಪ್ರಶ್ನೆಗೆ ಅರ್ಜಿದಾರರ ಪರ ವಕೀಲರು, ಅವರು ಸಮಾಜದ ಪ್ರತೀಕಾರಕ್ಕೆ ಹೆದರಿದ್ದಾರೆ,ಹೀಗಾಗಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಉತ್ತರಿಸಿದರು.

ತಮ್ಮ ಸಲಿಂಗ ವಿವಾಹವನ್ನು ನೋಂದಣಿ ಮಾಡಿಕೊಳ್ಳಲು ಅನುಮತಿ ಸಿಗದ ವ್ಯಕ್ತಿಗಳ ವಿವರಗಳನ್ನು ತನಗೆ ಒದಗಿಸುವಂತೆ ಅವರಿಗೆ ಸೂಚಿಸಿದ ನ್ಯಾಯಾಲಯವು,ವಿಚಾರಣೆಯನ್ನು ಅ.21ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News