ಚಿತ್ರೋದ್ಯಮದಲ್ಲೂ ಮಾದಕದ್ರವ್ಯ ವ್ಯಸನ ಇದೆ: ಬಿಜೆಪಿ ಸಂಸದ ರವಿ ಕಿಷನ್

Update: 2020-09-14 14:08 GMT

ಹೊಸದಿಲ್ಲಿ, ಸೆ. 13: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯಲ್ಲಿ ಚಿತ್ರೋದ್ಯಮದ ವಿರುದ್ಧ ಕೇಳಿ ಬಂದಿರುವ ಮಾದಕದ್ರವ್ಯ ಸಂಬಂಧಿ ಆರೋಪಗಳ ಬಗ್ಗೆ ಸಂಸತ್ತಿನಲ್ಲಿ ನಟ-ರಾಜಕಾರಣಿ ರವಿ ಕಿಷನ್ ಧ್ವನಿ ಎತ್ತಿದ್ದಾರೆ.

ಇದು ದೇಶದ ಯುವ ಜನರನ್ನು ನಾಶ ಮಾಡಲು ಪಾಕಿಸ್ತಾನ ಹಾಗೂ ಚೀನಾ ರೂಪಿಸಿದ ಸಂಚು ಎಂದು ಬಿಜೆಪಿ ಸಂಸದ ರವಿ ಕಿಷನ್ ಹೇಳಿದ್ದಾರೆ.

‘‘ದೇಶದ ಯುವ ಜನರನ್ನು ನಾಶ ಮಾಡಲು ಸಂಚು ನಡೆಯುತ್ತಿದೆ. ನಮ್ಮ ನೆರೆಯ ದೇಶ ಇದರೊಂದಿಗೆ ಸೇರಿದೆ. ಪಾಕಿಸ್ತಾನ ಹಾಗೂ ಚೀನಾದಿಂದ ಮಾದಕದ್ರವ್ಯಗಳ ಕಳ್ಳ ಸಾಗಾಟ ಪ್ರತಿ ವರ್ಷ ನಡೆಯುತ್ತಿದೆ. ಪಂಜಾಬ್ ಹಾಗೂ ನೇಪಾಳದ ಮೂಲಕ ಮಾದಕ ದ್ರವ್ಯವನ್ನು ಭಾರತಕ್ಕೆ ತರಲಾಗುತ್ತಿದೆ’’ ಎಂದು ಉತ್ತರ ಪ್ರದೇಶದ ಬಿಜೆಪಿ ಸಂಸದ ಹೇಳಿದರು.

‘‘ಚಿತ್ರರಂಗದಲ್ಲೂ ಮಾದಕದ್ರವ್ಯ ವ್ಯಸನ ಇದೆ. ಹಲವು ಜನರನ್ನು ಬಂಧಿಸಲಾಗಿದೆ. ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಉತ್ತಮ ಕೆಲಸ ಮಾಡುತ್ತಿದೆ. ಅಪರಾಧಿಗಳ ವಿರುದ್ಧ ಶೀಘ್ರ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಕೇಂದ್ರ ಸರಕಾರವನ್ನು ಆಗ್ರಹಿಸುತ್ತೇನೆ. ಅವರಿಗೆ ಸೂಕ್ತ ಶಿಕ್ಷೆ ನೀಡಬೇಕು. ಅಲ್ಲದೆ, ನೆರೆಯ ದೇಶಗಳ ಪಿತೂರಿಗೆ ಅಂತ್ಯ ಹಾಡಬೇಕು’’ ಎಂದು ಭೋಜ್‌ಪುರಿ ಹಾಗೂ ಹಿಂದಿ ಚಿತ್ರಗಳ ಜನಪ್ರಿಯ ನಟ ರವಿ ಕಿಷನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News