ಉಡುಪಿ: ಸೆ.15ರಿಂದ ಸರಕಾರಿ ವೈದ್ಯಾಧಿಕಾರಿಗಳಿಂದ ಸರಕಾರಿ ಸಭೆ ಬಹಿಷ್ಕಾರ
ಉಡುಪಿ, ಸೆ.14: ಸರಕಾರಿ ವೈದ್ಯಾಧಿಕಾರಿಗಳ ಬೇಡಿಕೆಗಳಿಗೆ ಸರಕಾರ ಸ್ಪಂದಿಸದೆ ಇರುವ ಕಾರಣ ಸೆ.15ರಿಂದ ಸೆ.20ರವರೆಗೆ ಆನ್‌ಲೈನ್ ಸಹಿತ ಎಲ್ಲ ಸರಕಾರಿ ಸಭೆಗಳಿಂದ ದೂರು ಉಳಿಯುವುದು ಮತ್ತು ಕೋವಿಡ್ -19 ಸಹಿತ ಎಲ್ಲ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ವರದಿಗಳನ್ನು ಸರಕಾರಕ್ಕೆ ನೀಡದೆ ಇರಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಸರಕಾರಿ ವೈದ್ಯಾಧಿಕಾರಿ ಗಳ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಡಾ.ಎಚ್.ಪ್ರಕಾಶ್‌ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಹಲವು ಬಾರಿ ಕೇಂದ್ರ ಸರಕಾರದ ಆರೋಗ್ಯ ಯೋಜನೆ ಮಾದರಿಯಲ್ಲಿ ವೇತನ ಪರಿಷ್ಕರಣೆ ಹಾಗೂ ಇನ್ನಿತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿತ್ತು. ಸೆ.15ರೊಳಗೆ ಬೇಡಿಕೆ ಈಡೇರಿಸದಿದ್ದರೆ ಹಂತಹಂತವಾಗಿ ಮುಷ್ಕರ ಹೂಡುವುದಾಗಿ ಎಚ್ಚರಿಕೆ ನೀಡಲಾಗಿತ್ತು ಎಂದರು.
ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಏಳನೆ ವೇತನ ಆಯೋಗದ ವೇತನ ಶ್ರೇಣಿ ನೀಡಲಾಗಿದೆ. ಆದರೆ ಕೋವಿಡ್ -19 ತುರ್ತು ಸ್ಥಿತಿ ಹಿನ್ನೆಲೆಯಲ್ಲಿ ಹಗಲಿರುಳು ದುಡಿಯುತ್ತಿರುವ ಸರಕಾರಿ ವೈದ್ಯಾಧಿಕಾರಿಗಳ ಬೇಡಿಕೆಗಳಿಗೆ ಸರಕಾರ ಸ್ಪಂದಿಸದ ಕಾರಣ ಈ ಮುಷ್ಕರ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.
ಒಂದು ವಾರದೊಳಗೆ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಸೆ.21ರಿಂದ ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸುವ ಮೂಲಕ ಮುಷ್ಕರ ನಡೆಸಲಾಗುವುದು ಹಾಗೂ ಬೆಂಗಳೂರು ಚಲೋ ಜಾಥವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಡಾ.ನರಸಿಂಹ ನಾಯಕ್, ಉಪಾಧ್ಯಕ್ಷ ಡಾ.ಉಮೇಶ್ ನಾಯಕ್, ಸಂಘಟನಾ ಕಾರ್ಯದರ್ಶಿ ಡಾ.ಗೋಪಾಲ್ ಎಸ್.ಜಿ., ಜಂಟಿ ಕಾರ್ಯದರ್ಶಿ ಡಾ.ಪ್ರತಾಪ್ ಕೆ., ಡಾ.ರಂಜಿತ್ ಉಪಸ್ಥಿತರಿದ್ದರು.