ಗೋವಿಂದ ಪೈ, ಡಾ.ಕಾರಂತರ ಕೃತಿ ಓದಿ ಅರ್ಥೈಸಿಕೊಳ್ಳಿ: ಪ್ರೊ. ಸುಂದರ್

Update: 2020-09-14 14:27 GMT

ಉಡುಪಿ, ಸೆ.14: ಮಂಜೇಶ್ವರ ಗೋವಿಂದ ಪೈ, ಡಾ.ಕೋಟ ಶಿವರಾಮ ಕಾರಂತ ಮುಂತಾದವರ ಗ್ರಂಥಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಮೂವಕ ಇಂದಿನ ಯುವ ಪೀಳಿಗೆ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹಿರಿಯ ಪುರಾತತ್ವ ಶಾಸ್ತ್ರಜ್ಞ ಪ್ರೊ.ಅ. ಸುಂದರ ಹೇಳಿದ್ದಾರೆ.

ಮಣಿಪಾಲ ಗ್ಲೋಬಲ್‌ನ ಮುಖ್ಯಸ್ಥ ಟಿ.ವಿ.ಮೋಹನದಾಸ ಪೈ ಅವರು ತನ್ನ ತಾಯಿ ವಿಮಲಾ ಪೈ ಅವರ ಹೆಸರಿನಲ್ಲಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಪ್ರಾಯೋಜಿಸಿರುವ ಡಾ.ಗೋವಿಂದ ಪೈ ಸ್ಮಾರಕ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.

ಒಂದು ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಪತ್ರವನ್ನು ಶನಿವಾರ ಶಿವಮೊಗ್ಗದ ಪ್ರಿಯದರ್ಶಿನಿ ಲೇಔಟ್ ಸಮುದಾಯ ಭವನದಲ್ಲಿ ಪ್ರೊ.ಸುಂದರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇಷ್ಟು ದಿನ ಹೊರಗಿನವರಿಂದ ಇತಿಹಾಸ ಬರೆಸಿದ್ದೆವು. ಅವರಲ್ಲಿ ಕೆಲವರು ಪ್ರಾಮಾಣಿಕವಾಗಿ ಇತಿಹಾಸ ರಚನೆ ಮಾಡಿದ್ದಾರೆ. ಅದೇ ರೀತಿ ಕೆಲವರಿಂದ ಎಷ್ಟೊ ತಪ್ಪುಗಳಾಗಿವೆ. ಅದು ಅವರ ತಪ್ಪಲ್ಲ; ಅವರಿಗೆ ತಿಳಿದಷ್ಟು ಬರೆದಿದ್ದಾರೆ. ಆ ತಪ್ಪನ್ನು ನಾವು ತಿದ್ದಬೇಕಾಗಿದೆ. ಅದಕ್ಕೆ ಸಂಶೋಧನೆ ಮತ್ತು ಆಸಕ್ತಿ ಅಗತ್ಯ ಎಂದವರು ಪ್ರತಿಪಾದಿಸಿದರು.

ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಖ್ಯಾತ ಇತಿಹಾಸಜ್ಞ ಡಾ. ಪುಂಡಿಕಾ ಗಣಪತಿ ಭಟ್ ಮಾತನಾಡಿ, ಪ್ರೊ.ಸುಂದರ್ ಅವರಲ್ಲಿ ಪಾಂಡಿತ್ಯದ ಜೊತೆಗೆ ಅಪಾರ ಶಿಷ್ಯ ವಾತ್ಸಲ್ಯವನ್ನು ಕಾಣಬಹುದು. ಪ್ರತಿಷ್ಠಿತ ಗೋವಿಂದ ಪೈ ಪ್ರಶಸ್ತಿ ಅರ್ಹ ವ್ಯಕ್ತಿಗೆ ದೊರಕಿದೆ ಎಂದರು.
ಡಾ.ಬಿ.ಜಗದೀಶ್ ಶೆಟ್ಟಿ, ಡಾ.ಬಾಲಕೃಷ್ಣ ಹೆಗಡೆ, ಡಾ.ಎಸ್.ಜಿ.ಸಾಮಕ್ ಅಭಿನಂದನಾ ಮಾತುಗಳನ್ನಾಡಿದರು. ಪ್ರೊ.ಸುಂದರ ಅವರ ಪುತ್ರಿ ವೀಣಾ ಅವರು ಉಪಸ್ಥಿತರಿದ್ದರು.

ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕರಾದ ಪ್ರೊ.ವರದೇಶ ಹಿರೇಗಂಗೆ ಅವರು ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, ಪ್ರೊ.ಸುಂದರ ಅವರ 300ಕ್ಕೂ ಅಧಿಕ ಸಂಶೋಧನಾ ಲೇಖನಗಳಲ್ಲಿ ಅತ್ಯುತ್ತಮವಾದ ಲೇಖನಗಳನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಹಾಗೂ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಪ್ರಕಟಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪ್ರೊ.ಎಂ.ಎಲ್.ಸಾಮಗ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News