ಮಣಿಪಾಲ: ಕೃಷಿ, ಆಹಾರ ಉತ್ಪನ್ನಗಳಲ್ಲಿ ಕೃತಕ ಬುದ್ದಿಮತ್ತೆ, ಯಂತ್ರ ಕಲಿಕೆ ತರಬೇತಿ

Update: 2020-09-14 14:29 GMT

ಮಣಿಪಾಲ, ಸೆ.14: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಕಂಪ್ಯೂಟರ್ ಸಾಯನ್ಸ್ ವಿಭಾಗದ ವತಿಯಿಂದ ‘ಕೃಷಿ ಮತ್ತು ಆಹಾರ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಜ್ಞಾನಾಧಾರಿತ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ’ ಕುರಿತ ಅಂತರ್ಜಾಲ ತರಬೇತಿ ಶಿಬಿರ ಆರು ದಿನಗಳ ಕಾಲ ಇಲ್ಲಿ ನಡೆಯಿತು.

ಶಿಬಿರದ ಉದ್ಘಾಟನೆಯಲ್ಲಿ ಹೈದರಾಬಾದ್ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ವಿದ್ಯಾಲಯದ ಪ್ರಾಚಾರ್ಯ ಡಾ.ಪಿ.ಕೃಷ್ಣ ರೆಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರೆ, ಎಂಐಟಿಯ ನಿರ್ದೇಶಕ ಡಾ.ಡಿ. ಶ್ರೀಕಾಂತ ರಾವ್ ಅಧ್ಯಕ್ಷತೆ ವಹಿಸಿದ್ದರು.

ಭಾರತದಲ್ಲಿ ಹಸಿರು ಕ್ರಾಂತಿ, ಆಹಾರ ಉತ್ಫಾದನೆಯಲ್ಲಿ ಸುಧಾರಣೆಯನ್ನು ತಂದಿದೆ. ಭಾರತದಲ್ಲಿ ಧವಸ ಧಾನ್ಯಗಳ ಬೇಡಿಕೆ ವಾರ್ಷಿಕ 250 ಮಿಲಿಯನ್ ಟನ್‌ನಿಂದ 400 ಮಿಲಿಯನ್ ಟನ್‌ಗೆ ಹೆಚ್ಚಳವಾಗಲಿದೆ. ಹಾಗಿದ್ದರೂ ಶೇ.27ರಷ್ಟು ಕೃಷಿಕರು ಇನ್ನು ಸಾಲದಲ್ಲೇ ಇದ್ದಾರೆ. ಶೇ.40ರಷ್ಟು ರೈತರು ಬೇರೊಂದು ಉದ್ಯೋಗ ಸಿಕ್ಕರೆ ಕೃಷಿಯನ್ನು ತ್ಯಜಿಸಲು ತಯಾರಿದ್ದಾರೆ. ಹೀಗಾಗಿ ಮಾಹಿತಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು ಕೃಷಿಕರ ಬೆಂಬಲಕ್ಕೆ ನಿಲ್ಲಬೇಕು ಎಂದು ತಮ್ಮ ಭಾಷಣದಲ್ಲಿ ಪ್ರೊ.ಪಿ. ಕೃಷ್ಣ ರೆಡ್ಡಿ ಹೇಳಿದರು.

ಡಾ.ಡಿ.ಶ್ರೀಕಾಂತ್ ರಾವ್ ಮಾತನಾಡಿ, ಭಾರತದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವಿದೆ. ಇತ್ತೀಚೆಗೆ ಸರಕಾರಗಳು ಕೃಷಿಗೆ ಹಾಗೂ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರೂ, ಅದು ರೈತರನ್ನು ಸರಿಯಾಗಿ ತಲುಪಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಆಶಾಲತಾ ನಾಯಕ್ ಅತಿಥಿ ಗಳನ್ನು ಸ್ವಾಗತಿಸಿದರು. ಶಿಬಿರದ ಸಂಯೋಜಕ ಡಾ. ಎನ್.ವಿ.ಸುಬ್ಬಾ ರೆಡ್ಡಿ ಶಿಬಿರದ ಮಾಹಿತಿ ನೀಡಿದರು. ಶಿಬಿರದ ಸಹ-ಸಂಯೋಜಕ ಡಾ.ನರೇಂದ್ರ ವಿ. ಜಿ. ವಂದಿಸಿದರು. ಶಿಬಿರದ ಸಹ-ಸಂಯೋಜಕರಾದ ಪ್ರೊ.ಶಿವಪ್ರಸಾದ್ ಜಿ., ಪ್ರೊ.ಮುರಳಿಕೃಷ್ಣ ಎಸ್. ಎನ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News