‘ನಾಯಿ ಬಾಲ ಡೊಂಕು’: ಕಂಗನಾ ವಿರುದ್ಧ ಶಿವಸೇನೆ ಶಾಸಕನ ಹೇಳಿಕೆ

Update: 2020-09-14 14:30 GMT

ಮುಂಬೈ,ಸೆ.14: ಬಾಲಿವುಡ್ ನಟಿ ಕಂಗನಾ ರಾಣಾವತ್ ಮತ್ತು ಮಹಾರಾಷ್ಟ್ರದ ಆಡಳಿತಾರೂಢ ಪಕ್ಷದ ನಡುವೆ ತೀವ್ರಗೊಂಡಿರುವ ರಾಜಕೀಯ ವಿವಾದದ ನಡುವೆಯೇ ಶಿವಸೇನೆ ಶಾಸಕ ಪ್ರತಾಪ ಸರನಾಯಕ್ ಅವರು, ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ಕ್ಕೆ ಹೋಲಿಸಿದ್ದ ತನ್ನ ಹೇಳಿಕೆಗೆ ಅಂಟಿಕೊಂಡಿರುವುದಕ್ಕಾಗಿ ಕಂಗನಾರನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ.

‘ನಾಯಿಬಾಲ ಎಂದಿದ್ದರೂ ಡೊಂಕೇ, ಎಷ್ಟೇ ಪ್ರಯತ್ನಪಟ್ಟರೂ ಅದು ನೆಟ್ಟಗಾಗುವುದಿಲ್ಲ ಎಂಬ ಮಾತಿನ ಅರ್ಥ ಇಂದು ನನಗೆ ಗೊತ್ತಾಗಿದೆ. ಶಿವಸೇನೆ ಸರಕಾರಕ್ಕೆ ಕೆಡುಕನ್ನುಂಟು ಮಾಡಲು ಕಳೆದೊಂದು ವಾರದಿಂದ ಕಂಗನಾರ ಬೆಂಬಲ ಪಡೆದುಕೊಂಡಿದ್ದ ಜನರು ಈಗ ಆಕೆ ಮುಂಬೈ ತೊರೆದಿರುವುದರಿಂದ ಕಸಿವಿಸಿಗೊಳಗಾಗಿದ್ದಾರೆ. ಈಗ ಅವರು ಬೊಬ್ಬೆ ಹೊಡೆಯುತ್ತಿರಬಹುದು ’ಎಂದು ಸರನಾಯಕ್ ಟ್ವೀಟಿಸಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣ ಕುರಿತು ಮುಂಬೈಯನ್ನು ಪಿಒಕೆಗೆ ಹೋಲಿಸಿ ಹೇಳಿಕೆ ನೀಡಿದಾಗಿನಿಂದ ಕಂಗನಾ ಶಿವಸೇನೆ ಮತ್ತು ಮಿತ್ರಪಕ್ಷಗಳ ದಾಳಿಗಳಿಗೆ ಗುರಿಯಾಗಿದ್ದಾರೆ.

ಸುಶಾಂತ್ ಸಾವಿನ ಪ್ರಕರಣವನ್ನು ಡ್ರಗ್ಸ್ ಕೋನದಿಂದ ತನಿಖೆ ನಡೆಸುವಂತೆ ಸರನಾಯಕ್ ಕಳೆದ ವಾರ ಮಹಾರಾಷ್ಟ್ರ ಸರಕಾರವನ್ನು ಕೋರಿದ್ದು, ಅದು ತನಿಖೆಗೆ ಅಸ್ತು ಎಂದಿದೆ.

ಸೋಮವಾರ ಮುಂಬೈನಿಂದ ಹಿಮಾಚಲ ಪ್ರದೇಶದ ತನ್ನ ಊರಿಗೆ ನಿರ್ಗಮಿಸುವ ಮುನ್ನ ಕಂಗನಾ, ನಿರಂತರ ದಾಳಿಗಳು ಮತ್ತು ನಿಂದನೆಗಳು ತನಗೆ ಭೀತಿಯನ್ನು ಮೂಡಿಸಿವೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಮುಂಬೈಯನ್ನು ಪಿಒಕೆಗೆ ಹೋಲಿಸಿದ ತನ್ನ ಹೇಳಿಕೆಗೆ ತಾನು ಬದ್ಧನಾಗಿದ್ದೇನೆ ಎಂದು ಅವರು ಘೋಷಿಸಿದರು.

ತನಗಾಗುತ್ತಿರುವ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಕಂಗನಾ ರವಿವಾರ ಮಹಾರಾಷ್ಟ್ರ ರಾಜ್ಯಪಾಲ ಭಗತಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News