ಅಡಿಕೆ ಬೆಳೆಗೆ ಹನಿ ನೀರಾವರಿ ಅಳವಡಿಕೆ: ಯಶಸ್ಸು ಕಂಡ ಪುತ್ತೂರಿನ ರೈತ ಮಹಿಳೆ
Update: 2020-09-14 20:09 IST
ಮಂಗಳೂರು, ಸೆ.14: ತೋಟಗಾರಿಕೆ ಇಲಾಖೆಯು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮದ ಪ್ರಯೋಜನ ಪಡೆದ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಚಂದ್ರಾವತಿ ಎಂಬವರು ತನ್ನ ಅಡಿಕೆ ತೋಟಕ್ಕೆ ಹನಿ ನೀರಾವರಿ ಅಳವಡಿಕೊಂಡು ಯಶಸ್ವಿಯಾಗಿದ್ದಾರೆ.
ಈ ಯೋಜನೆಯಡಿ ರೈತರಿಗೆ 2 ಹೆಕ್ಟೇರ್ ಪ್ರದೇಶದವರೆಗೆ ಶೇ.90 ರಷ್ಟು ಸಹಾಯಧನವನ್ನು ಇಲಾಖೆ ನೀಡುತ್ತಿದೆ. ನೀರಿನ ಕೊರತೆ ಮತ್ತು ಕೂಲಿಯಾಳುಗಳ ಸಮಸ್ಯೆಯಿಂದ ಬೇಸತ್ತ ಚಂದ್ರಾವತಿ ತೋಟಗಾರಿಕೆ ಇಲಾಖೆಯ ಮೂಲಕ ಅಡಿಕೆ ತೋಟಕ್ಕೆ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ.
ಇದರಲ್ಲಿ ಯಶಸ್ಸು ಕಂಡಿರುವ ಚಂದ್ರಾವತಿ 'ಹನಿ ನೀರಾವರಿಯಲ್ಲಿ ಪ್ರತೀ ದಿನವೂ ಬೆಳೆಗೆ ಬೇಕಾದ ಪ್ರಮಾಣದಲ್ಲಿ ನೀರನ್ನು ಕೊಡುವುದರಿಂದ ತೇವಾಂಶವು ಹೆಚ್ಚಿನ ಬಿಗಿತವಿಲ್ಲದೆ ಬೆಳೆಗೆ ಒಂದೇ ಸಮನೆ ದೊರೆಯವುದರಿಂದ ಯಾವುದೇ ಕಾಲದಲ್ಲಿ ನೀರಿನ ಕೊರತೆ ಇಲ್ಲ. ಕಳೆಯ ಸಮಸ್ಯೆಯೂ ಇಲ್ಲ. ಕೂಲಿ ವೆಚ್ಚದಲ್ಲಿ ಉಳಿತಾಯವಾಗಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.