ಕೋವಿಡ್-19: ಭಾರತದಲ್ಲೀಗ ವಿಶ್ವದಲ್ಲೇ ಅತಿ ಹೆಚ್ಚು ಚೇತರಿಕೆ ಪ್ರಮಾಣ

Update: 2020-09-14 14:40 GMT

ಹೊಸದಿಲ್ಲಿ,ಸೆ.14: ಭಾರತವೀಗ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಕೊರೋನ ವೈರಸ್ ಚೇತರಿಕೆ ಪ್ರಕರಣಗಳನ್ನು ದಾಖಲಿಸಿದೆ. ಈ ವಿಷಯದಲ್ಲಿ ಸೋಮವಾರ ಬ್ರೆಝಿಲ್‌ನ್ನು ಹಿಂದಿಕ್ಕಿರುವ ಭಾರತವು 37,80,107 ಕೊರೋನ ವೈರಸ್ ಚೇತರಿಕೆ ಪ್ರಕರಣಗಳೊಂದಿಗೆ ವಿಶ್ವದಲ್ಲಿ ಅಗ್ರಸ್ಥಾನಕ್ಕೆ ತಲುಪಿದೆ.

ವಿಶ್ವಾದ್ಯಂತದ ಕೋವಿಡ್ 19 ದತ್ತಾಂಶಗಳನ್ನು ಸಂಕಲಿಸುತ್ತಿರುವ ಜಾನ್ಸ್ ಹಾಪ್ಕಿನ್ಸ್ ವಿವಿಯ ಅಂಕಿಅಂಶಗಳಂತೆ,ವಿಶ್ವಾದ್ಯಂತ ಒಟ್ಟು 2,90,06,003 ಕೊರೋನ ವೈರಸ್ ಪ್ರಕರಣಗಳು ದಾಖಲಾಗಿದ್ದು,ಈ ಪೈಕಿ 1,96,25,959 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಮತ್ತು 9,24,105 ಜನರು ಮೃತಪಟ್ಟಿದ್ದಾರೆ.

ವಿವಿಯ ವರದಿಯಂತೆ ಭಾರತವೀಗ 37,89,107 ಚೇತರಿಕೆ ಪ್ರಕರಣಗಳೊಂದಿಗೆ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದೆ. ಬ್ರಾಝಿಲ್‌ನಲ್ಲಿ 37,23,206 ಜನರು ಮತ್ತು ಅಮೆರಿಕದಲ್ಲಿ 24,51,404 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇದೇ ವೇಳೆ,ಭಾರತದಲ್ಲಿ ಚೇತರಿಕೆ ದರ ಶೇ.78ಕ್ಕೆ ತಲುಪಿದ್ದು,ಇದು ಪ್ರತಿದಿನ ಹೆಚ್ಚೆಚ್ಚು ಜನರು ಸೋಂಕಿನಿಂದ ಗುಣಮುಖರಾಗು ತ್ತಿರುವುದನ್ನು ತೋರಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಸೋಮವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 77,512 ರೋಗಿಗಳು ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದರೊಂದಿಗೆ ಒಟ್ಟು ಚೇತರಿಕೆ ಪ್ರಕರಣಗಳ ಸಂಖ್ಯೆ 37,80,107ಕ್ಕೇರಿದೆ.ಚೇತರಿಕೆ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ನಿರಂತರವಾಗಿ ಹೆಚ್ಚುತ್ತಿದ್ದು,ಸೋಮವಾರ ಅದು 27,93,509ಕ್ಕೆ ತಲುಪಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಸಚಿವಾಲಯವು,ಶೇ,60ರಷ್ಟು ಚೇತರಿಕೆ ಪ್ರಕರಣಗಳು ಮಹಾರಾಷ್ಟ್ರ,ಕರ್ನಾಟಕ,ಉತ್ತರ ಪ್ರದೇಶ,ಆಂಧ್ರಪ್ರದೇಶ ಮತ್ತು ತಮಿಳುನಾಡು ಈ ಐದು ರಾಜ್ಯಗಳಲ್ಲಿ ದಾಖಲಾಗಿವೆ ಎಂದು ಹೇಳಿದೆ.

 ಸೋಮವಾರ ಬೆಳಿಗ್ಗೆವರೆಗೆ ದೇಶದಲ್ಲಿ ಒಟ್ಟು 48,46,427 ಕೊರೋನ ವೈರಸ್ ಪ್ರಕರಣಗಳು ದಾಖಲಾಗಿದ್ದು,9,86,598 ಪ್ರಕರಣಗಳು ಸಕ್ರಿಯವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News