ನೀಟ್ ಕುರಿತು ಹೇಳಿಕೆ: ನಟ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಹೈಕೋರ್ಟ್ ನ್ಯಾಯಾಧೀಶರ ಆಗ್ರಹ

Update: 2020-09-14 15:50 GMT

ಚೆನ್ನೈ,ಸೆ.14: ಕೊರೋನ ವೈರಸ್ ಸಾಂಕ್ರಾಮಿಕದ ನಡುವೆಯೇ ನೀಟ್ ಪರೀಕ್ಷೆ ನಡೆಸುತ್ತಿರುವುದಕ್ಕೆ ಹೇಳಿಕೆಗಾಗಿ ತಮಿಳು ನಟ ಸೂರ್ಯ ಅವರ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಕ್ರಮವನ್ನು ಆರಂಭಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಎಸ್.ಎಂ.ಸುಬ್ರಮಣಿಯಂ ಅವರು ಮುಖ್ಯ ನ್ಯಾಯಮೂರ್ತಿ ಅಮರೇಶ್ವರ ಪ್ರತಾಪ ಸಾಹಿ ಅವರನ್ನು ಆಗ್ರಹಿಸಿದ್ದಾರೆ.

ನ್ಯಾಯಾಲಯಗಳು ನಿರ್ಭೀತಿಯಿಂದ ಪರೀಕ್ಷೆಯನ್ನು ಬರೆಯುವಂತೆ ವಿದ್ಯಾರ್ಥಿಗಳಿಗೆ ಆದೇಶಿಸುತ್ತಿವೆಯಾದರೂ ಕೋವಿಡ್ ಸಾಂಕ್ರಾಮಿಕದ ಮಧ್ಯೆ ಖುದ್ದು ನ್ಯಾಯಾಧೀಶರೇ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದಾರೆ. ನೀಟ್ ಪರೀಕ್ಷೆಗೆ ಹಾಜರಾಗಬೇಕಿದ್ದ ತಮಿಳುನಾಡಿನ ಐವರು ವಿದ್ಯಾರ್ಥಿಗಳು ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ನ್ಯಾಯಯುತವಲ್ಲದ ಪರೀಕ್ಷೆಗಳ ವ್ಯವಸ್ಥೆಯಿಂದಾಗಿ ತಮ್ಮ ಮಕ್ಕಳನ್ನು ಕಳೆದುಕೊಂಡ ಹೆತ್ತವರಿಗೆ ಜೀವಾವಧಿ ದಂಡನೆಯಾಗುತ್ತದೆ ಎಂದು ಸೂರ್ಯ ರವಿವಾರ ಹೇಳಿಕೆಯಲ್ಲಿ ತಿಳಿಸಿದ್ದರು.

ಸೂರ್ಯ ಹೇಳಿಕೆಯನ್ನು ಆಕ್ಷೇಪಿಸಿರುವ ಸುಬ್ರಮಣಿಯಂ, ನ್ಯಾಯಾಂಗ ನಿಂದನೆ ಕ್ರಮವನ್ನು ಆರಂಭಿಸಿ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಘನತೆಯನ್ನು ಎತ್ತಿಹಿಡಿಯುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ. ನ್ಯಾಯಾಧೀಶರು ತಮ್ಮ ಸ್ವಂತ ಜೀವಗಳ ಬಗ್ಗೆ ಹೆದರಿದ್ದಾರೆ ಮತ್ತು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯದಾನ ಮಾಡುತ್ತಿದ್ದಾರೆ. ಹೀಗಿರುವಾಗ ನಿರ್ಭೀತಿಯಿಂದ ಪರೀಕ್ಷೆಗೆ ಹಾಜರಾಗಿ ಎಂದು ವಿದ್ಯಾರ್ಥಿಗಳಿಗೆ ಆದೇಶಿಸಲು ಅವರಿಗೆ ನೈತಿಕತೆಯಿಲ್ಲ ಎಂದು ಸೂರ್ಯ ಹೇಳಿಕೆಯು ಸೂಚಿಸುತ್ತಿದೆ. ತನ್ನ ಅಭಿಪ್ರಾಯದಲ್ಲಿ ಈ ಹೇಳಿಕೆಯು ನ್ಯಾಯಾಂಗ ನಿಂದನೆಯಾಗಿದೆ ಎಂದು ಅವರು ಹೇಳಿದ್ದಾರೆ.

ಯಾರೂ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ಹೇಳಿದ ತಮಿಳುನಾಡಿನ ಅಡ್ವೊಕೇಟ್ ಜನರಲ್ ವಿಜಯ ನಾರಾಯಣ ಅವರು, ನ್ಯಾಯಾಂಗ ನಿಂದನೆ ಕ್ರಮಕ್ಕೆ ಮುನ್ನ ಅಡ್ವೊಕೇಟ್ ಜನರಲ್ ಅಭಿಪ್ರಾಯವನ್ನು ಕೋರಲಾಗುತ್ತದೆ. ಆದರೆ ನ್ಯಾಯಾಲಯ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಕ್ರಮ ಆರಂಭಿಸಲು ಇದು ಅಡ್ಡಿಯಾಗುವುದಿಲ್ಲ. ಮುಖ್ಯ ನ್ಯಾಯಾಧೀಶರು ಏನು ಮಾಡುತ್ತಾರೆ ಎನ್ನುವುದು ತನಗೆ ಗೊತ್ತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News