ಭಾಷಾ ನೀತಿ ಮರುಪರಿಶೀಲನೆ, 22 ಭಾಷೆಗಳನ್ನೂ ಆಡಳಿತ ಭಾಷೆಗಳನ್ನಾಗಿ ಮಾಡಲು ಆಗ್ರಹಿಸಿ ಧರಣಿ
ಬೆಂಗಳೂರು, ಸೆ.14: ಭಾರತದ ಭಾಷಾ ನೀತಿಯನ್ನು ಮರುಪರಿಶೀಲಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಕೇಂದ್ರ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಇಪ್ಪತ್ತೆರಡು ಭಾಷೆಗಳನ್ನೂ ಆಡಳಿತ ಭಾಷೆಗಳನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದಲ್ಲಿಂದು ಧರಣಿ ನಡೆಸಲಾಯಿತು.
ನಗರದ ಆನಂದ್‍ರಾವ್ ವೃತ್ತದಲ್ಲಿ ಜಮಾಯಿಸಿದ ವೇದಿಕೆಯ ನೂರಾರು ಕಾರ್ಯಕರ್ತರು, ಕೇಂದ್ರ ಸರಕಾರ ಹಿಂದಿ ದಿವಸ್ ಆಚರಣೆ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಒಕ್ಕೂಟ ಸರಕಾರವು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಮಾತ್ರವೇ ತನ್ನ ಆಡಳಿತ ಭಾಷೆಗಳನ್ನಾಗಿ ಮಾಡಿಕೊಂಡಿರುವುದು ದೇಶದ ಇತರ ಭಾಷೆಗಳಿಗೆ, ಭಾಷಿಗರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತ ಬಹುಭಾಷೆ, ಸಂಸ್ಕೃತಿ, ಧರ್ಮಗಳ ನಾಡು. ಈ ಬಹುತ್ವ ಉಳಿದರಷ್ಟೇ ಒಕ್ಕೂಟ ಉಳಿಯಲು ಸಾಧ್ಯ. ಹಿಂದಿ ಭಾಷೆಯೊಂದಕ್ಕೆ ಮಾತ್ರ ಉಳಿದ ಭಾಷೆಗಳಿಗಿಂತ ಮೇಲಿನ ಸ್ಥಾನ ನೀಡಿ, ಸಾಂವಿಧಾನಿಕ ಸಂಸ್ಥೆಗಳ ಮೂಲಕವೇ ಎಲ್ಲ ಹಿಂದಿಯೇತರ ಜನಗಳ ಮೇಲೆ ಹೇರಿಕೆ ಮಾಡುತ್ತಿರುವುದು ತಕ್ಷಣದಿಂದಲೇ ನಿಲ್ಲಬೇಕಾಗಿದೆ. ಕಳೆದ ಇಪ್ಪತ್ತೊಂದು ವರ್ಷಗಳಿಂದಲೂ ಹೇರಿಕೆ ವಿರುದ್ಧ ಹೋರಾಟ ನಡೆಯುತ್ತಲೇ ಇದ್ದು, ಆಳುವವರು ನಿರ್ಲಕ್ಷಿಸಿದ್ದಾರೆ ಎಂದು ದೂರಿದರು.
ಭಾರತಕ್ಕೆ ಯಾವುದೇ ಒಂದು ರಾಷ್ಟ್ರಭಾಷೆ ಇಲ್ಲ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳೂ ದೇಶದ ರಾಷ್ಟ್ರೀಯ ಭಾಷೆಗಳೇ ಆಗಿವೆ. ಈ ಭಾಷೆಗಳ ನಡುವೆ ತಾರತಮ್ಯ ಎಸಗಿದರೆ, ಅದು ಸಂವಿಧಾನವೇ ಹೇಳುವ ಸಮಾನತೆಯ ತತ್ವಗಳಿಗೆ ವಿರುದ್ಧವಾಗಿರುತ್ತದೆ. ಆದರೆ ಅಧಿಕೃತ ಭಾಷೆ ಕಾಯ್ದೆಯ ಹೆಸರಿನಲ್ಲಿ ಹಿಂದಿಯೇತರ ಭಾರತೀಯರ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಕಾರ್ಯಕ್ರಮಗಳು ಸಂವಿಧಾನ ಜಾರಿಯಾದಂದಿನಿಂದಲೂ ನಡೆದುಕೊಂಡು ಬಂದಿವೆ ಎಂದು ಹೋರಾಟಗಾರರು ದೂರಿದರು.
ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಹಿಂದಿ ದಿವಸ, ಹಿಂದಿ ಸಪ್ತಾಪ, ಹಿಂದಿ ಪಕ್ವಾಡದ ಹೆಸರಿನಲ್ಲಿ ಭಾರತದ ತೆರಿಗೆದಾರರ ಹಣದಿಂದ ಹಿಂದಿಯೇತರ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳಿಗೂ ಸಮಾನ ಸ್ಥಾನಮಾನ ಇರಬೇಕು. ಆದರೆ ಸರಕಾರದ ನೀತಿ ಇಡೀ ದೇಶದ ತುಂಬೆಲ್ಲ ಒಂದೇ ಭಾಷೆ ಇರಬೇಕು ಎಂಬಂತೆ ಕಾಣುತ್ತಿದೆ ಎಂದು ಆಕ್ಷೇಪಿಸಿದರು.
ಈ ನೀತಿಯಿಂದಾಗಿ ಈ ದೇಶದ ಭಾಷೆ ವೈವಿಧ್ಯಕ್ಕೆ ಧಕ್ಕೆಯಾಗುತ್ತದೆ. ದೇಶದ ಎಲ್ಲ ಭಾಷೆಗಳೂ ಜೀವಂತವಾಗಿರಬೇಕು, ಎಲ್ಲ ಭಾಷೆಗಳೂ ಬೆಳೆಯಬೇಕು ಎಂಬುದು ನಮ್ಮ ಸ್ಪಷ್ಟ ನಿಲುವು. ಹಿಂದಿಯೂ ಸಹ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಒರಿಯಾ, ಅಸ್ಸಾಮಿ, ಪಂಜಾಬಿ ಭಾಷೆಗಳ ಹಾಗೆ ಒಂದು ಭಾಷೆಯಾಗಿದೆ. ಜಗತ್ತಿನ ನಾನಾ ದೇಶಗಳಲ್ಲಿ ಒಂದು ಭಾಷೆಯನ್ನು ಬೆಳೆಸಲು ಹೊರಟು, ಉಳಿದ ಭಾಷೆಗಳನ್ನು ಕಡೆಗಣಿಸಿದ ಪರಿಣಾಮವಾಗಿ ಜನರು ಬಂಡೆದ್ದು ಹೋರಾಟ ನಡೆಸಿದ ಇತಿಹಾಸವನ್ನು ತಾವು ಗಮನಿಸಬೇಕು ಎಂದು ತಿಳಿಸಿದರು.
ಒಂದು ಭಾಷೆಯನ್ನು ಹೇರುತ್ತ, ಇತರ ಭಾಷೆಗಳನ್ನು ನಿರ್ಲಕ್ಷಿಸುವುದು ಆಯಾ ಜನಸಮುದಾಯದ ಅಸ್ತಿತ್ವದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಭಾಷೆವಾರು ಪ್ರಾಂತ್ಯ ವಿಂಗಡಣೆ ನಡೆದಿದ್ದು, ಇಂಥ ಅಸಮಾನತೆಗಳನ್ನು ತಡೆಗಟ್ಟಲು ಎಂಬುದನ್ನು ತಾವು ಗಮನಿಸಬೇಕು. ಕೇಂದ್ರ ಸರಕಾರದ ಹಿಂದಿಪರವಾದ ನೀತಿಗಳಿಂದಾಗಿ, ಹಿಂದಿ ಭಾಷಿಕರು ಇತರ ಭಾಷಿಕರಿಗಿಂತ ಶಿಕ್ಷಣ, ಉದ್ಯೋಗದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚಿನ ಆದ್ಯತೆ, ಅವಕಾಶಗಳನ್ನು ಪಡೆಯುತ್ತಿದ್ದಾರೆ ಎಂದರು.
ಹಿಂದಿ ಭಾಷಿಕರು ದೇಶದ ಯಾವುದೇ ರಾಜ್ಯಕ್ಕೆ ಹೋಗಿ ನೆಲೆಸಿದರೆ ಅವರಿಗೆ ಕೇಂದ್ರ ಸರಕಾರದ ಎಲ್ಲ ಸೇವೆಗಳೂ ಹಿಂದಿ ಭಾಷೆಯಲ್ಲೇ ಸಿಗುತ್ತವೆ. ಆದರೆ ಒಬ್ಬ ಕನ್ನಡಿಗ, ಒಬ್ಬ ಮಲಯಾಳಿ ಅಥವಾ ಇನ್ಯಾವುದೇ ಭಾಷೆಗಳ ಜನರಿಗೆ ಬೇರೆ ರಾಜ್ಯಗಳಲ್ಲಿ ತಮ್ಮ ಭಾಷೆಗಳಲ್ಲಿ ಸೇವೆ ಲಭಿಸುವುದಿಲ್ಲ. ಇಂಥ ತಾರತಮ್ಯಗಳು ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತ ಬರುತ್ತವೆ ಎಂಬುದನ್ನು ತಾವು ಗಮನಿಸಬೇಕಿದೆ ಎಂದು ಅವರು ಹೇಳಿದರು.
ಅಸಮಾನತೆಯನ್ನು ತೊಡೆದು ಹಾಕಿ, ಸಮಾನತೆಯನ್ನು ಎತ್ತಿ ಹಿಡಿಯಲು ಸರಕಾರ ಮುಂದಿನ ದಿನಗಳಲ್ಲಿ ಹಿಂದಿ ದಿವಸ, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಾಗಳಂಥ ಅರ್ಥಹೀನ, ಅಸಮಾನತೆಯನ್ನು ಹೇರುವ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು. ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಇಪ್ಪತ್ತೆರಡು ಭಾಷೆಗಳನ್ನು ಕೇಂದ್ರ ಸರಕಾರದ ಆಡಳಿತ ಭಾಷೆಗಳನ್ನಾಗಿ ಮಾಡಬೇಕು. ಹಿಂದಿ ಮತ್ತು ಇಂಗ್ಲಿಷ್ ಗೆ ನೀಡಲಾಗಿರುವ ಮಾನ್ಯತೆ ಮತ್ತು ಅವಕಾಶಗಳನ್ನು ಇತರ ಎಲ್ಲ ಭಾಷೆಗಳಿಗೂ ನೀಡಬೇಕು ಎಂದು ಆಗ್ರಹಿಸಿದರು.