ನನಗೆ ಮೋದಿಯಿಂದ ಶ್ಲಾಘನೆ: ಚುನಾವಣಾ ಪ್ರಚಾರ ಸಭೆಯಲ್ಲಿ ಟ್ರಂಪ್ ಘೋಷಣೆ

Update: 2020-09-14 17:18 GMT

ವಾಶಿಂಗ್ಟನ್, ಸೆ. 14: ಕೊರೋನ ವೈರಸ್ ಪರೀಕ್ಷೆಯ ವಿಷಯದಲ್ಲಿ ನಾನು ದೊಡ್ಡ ಸಾಧನೆ ಮಾಡಿದ್ದೇನೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ನನ್ನ ಎದುರಾಳಿಯಾಗಿರುವ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್, ಹಿಂದಿನ ಸರಕಾರದಲ್ಲಿ ಹಂದಿ ಜ್ವರವನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

 ‘‘ಈವರೆಗೆ ಕೊರೋನ ವೈರಸ್ ಪರೀಕ್ಷೆಯ ವಿಷಯದಲ್ಲಿ ನಾವು ಭಾರತಕ್ಕಿಂತ ಹೆಚ್ಚಿನ ಸಂಖ್ಯೆಯ ಜನರನ್ನು ತಪಾಸಣೆಗೆ ಒಳಪಡಿಸಿದ್ದೇವೆ. ದೊಡ್ಡ ದೊಡ್ಡ ದೇಶಗಳನ್ನೆಲ್ಲ ಒಂದುಗೂಡಿಸಿದರೂ, ನಾವು ಮಾಡಿರುವ ಪರೀಕ್ಷೆಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಭಾರತವು ಅವೆುರಿಕದ ಬಳಿಕ ಎರಡನೇ ಸ್ಥಾನದಲ್ಲಿದೆ. ನಾವು ಭಾರತಕ್ಕಿಂತ 4.4 ಕೋಟಿ ಹೆಚ್ಚು ಪರೀಕ್ಷೆಗಳನ್ನು ನಡೆಸಿದ್ದೇವೆ. ಅಲ್ಲಿ (ಭಾರತದಲ್ಲಿ) 150 ಕೋಟಿ ಜನರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನನಗೆ ಕರೆ ಮಾಡಿ, ‘‘ಕೊರೋನ ವೈರಸ್ ಪರೀಕ್ಷೆಯಲ್ಲಿ ನೀವು ಎಷ್ಟೊಂದು ಸಾಧನೆ ಮಾಡಿದ್ದೀರಿ’’ ಎಂದು ಉದ್ಗರಿಸುವ ಮೂಲಕ ನನ್ನನ್ನು ಅಭಿನಂದಿಸಿದ್ದಾರೆ ಎಂದು ನೆವಾಡ ರಾಜ್ಯದ ರೆನೊ ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ಟ್ರಂಪ್ ಹೇಳಿದರು.

ಅಮೆರಿಕ ನಡೆಸಿದ ಕೊರೋನ ವೈರಸ್ ಪರೀಕ್ಷೆಯ ವಿಷಯದಲ್ಲಿ ಪ್ರಧಾನಿ ಮೋದಿಯ ಪ್ರಶಂಸೆಯನ್ನು ಮಾಧ್ಯಮಗಳಿಗೆ ವಿವರಿಸಬೇಕಾಗಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟರು.

ಕೊರೋನ ವೈರಸನ್ನು ನಿಭಾಯಿಸಿದ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಮಾಧ್ಯಮಗಳಿಂದ ಭಾರೀ ಟೀಕೆಗೆ ಒಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News