ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಡುಮಾರ್ನಾಡು ಪಂಚಾಯತ್‍ಗೆ ಮುತ್ತಿಗೆ

Update: 2020-09-14 17:19 GMT

ಮೂಡುಬಿದಿರೆ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ(ರಿ) ಶಿವಾಲಯ ಪಡುಮಾರ್ನಾಡು ಇದರ ವತಿಯಿಂದ ಪಡುಮಾರ್ನಾಡು ಗ್ರಾ.ಪಂ ಗೆ ಸೋಮವಾರ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಯಿತು. 

ರಾಜ್ಯ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಯಾದವ ಶೆಟ್ಟಿ ಅವರು ಪಿಡಿಒ ರವಿ ಅವರನ್ನು ತರಾಟೆಗೆ ತೆಗೆದುಕೊಂಡು ಮಾತನಾಡಿ, ದಲಿತರು ಆರ್ಥಿಕವಾಗಿ ಮಾತ್ರ ವಂಚಿತರಲ್ಲ ಅವರು ಸಾಮಾಜಿಕವಾಗಿಯೂ ಕೂಡಾ ವಂಚಿತರಾಗಿದ್ದಾರೆ. ಅವರಿಗೆ ಪ್ರಥಮ ಆದ್ಯತೆಯನ್ನು ನೀಡಬೇಕಾಗಿದೆ. ಕಾನೂನು ಬದ್ಧವಾಗಿರುವ ಹಕ್ಕನ್ನು ನೀಡಬೇಕಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದೆ ಆದರೂ ನೀರಿನ ಬಿಲ್ಲನ್ನು ಪಾವತಿಸುವಂತೆ ಒತ್ತಾಯ ಮಾಡಲಾಗುತ್ತಿದೆ. ಅಸಹಾಯಕ ಪರಿಸ್ಥಿತಿಯಲ್ಲಿರುವ ಕೆಲವು ಕುಟುಂಬಗಳು ಇದರಿಂದಾಗಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಪಡುಮಾರ್ನಾಡು ಪಂಚಾಯತ್‍ನಲ್ಲಿ  ಎಸ್‍ಸಿ ಎಸ್‍ಟಿ ಅನುದಾನ ವಿನಿಯೋಗ ಆಗುತ್ತಿಲ್ಲ. ಈ ಅನುದಾನವನ್ನು ನೀರಿನ ಬಿಲ್ಲ್ ಗೆ ವಿನಿಯೋಗಿಸುವಂತೆ ಆಗ್ರಹಿಸಿದರು.

ಮನೆ ನಿವೇಶನಕ್ಕೆ ಹಕ್ಕು ಪತ್ರ ಇಲ್ಲದಿರುವುದರಿಂದ ಆರ್‍ಟಿಸಿ ಮತ್ತು ಡೋರ್ ನಂಬ್ರ ಸಿಗುವುದಿಲ್ಲ. ಇದರಿಂದಾಗಿ ಉದ್ಯೋಗ ಖಾತರಿ ಯೋಜನೆಯಲ್ಲಿ ಉದ್ಯೋಗ ಮಾಡಲು ತೊಂದರೆಯಾಗುತ್ತಿದ್ದು, ಆದಷ್ಟು ಬೇಗನೇ ಹಕ್ಕು ಪತ್ರ ನೀಡಬೇಕಾಗಿದೆ. ಅಲ್ಲದೆ ದಾಖಲೆ ಪತ್ರಗಳು ಸರಿಯಾಗಿ ಇಲ್ಲದಿರುವುದರಿಂದ ಹಲವರ ಮನೆಗಳಿಗೆ ಶೌಚಾಲಯಗಳು ಇಲ್ಲ. ಈ ದಾಖಲೆ ಪತ್ರಗಳನ್ನು ಸರಿಪಡಿಸಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು. 

ದಲಿತ ಹಕ್ಕುಗಳ ಸಮಿತಿಯ ಸಂಚಾಲಕರುಗಳಾದ  ಶಂಕರ ವಾಲ್ಪಾಡಿ, ಕೃಷ್ಣಪ್ಪ ಕೊಣಾಜೆ, ಭೀಮ ಘರ್ಜನೆ ಸಮಿತಿಯ ಜಿಲ್ಲಾ ಸಂಚಾಲಕ ಪ್ರಭಾಕರ, ರೈತ ಸಂಘದ ಮೂಡುಬಿದಿರೆ ತಾಲೂಕಿನ ಅಧ್ಯಕ್ಷ ಸುಂದರ ಶೆಟ್ಟಿ ಈ ಸಂದರ್ಭದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News