ಯುಪಿಎ ಸರಕಾರ ಉರುಳಿಸಲು ಬಿಜೆಪಿ-ಆರೆಸ್ಸೆಸ್ ಆಪ್‌ನ್ನು ಪ್ರೇರೇಪಿಸಿದ್ದವು: ರಾಹುಲ್ ಗಾಂಧಿ

Update: 2020-09-15 14:20 GMT

ಹೊಸದಿಲ್ಲಿ,ಸೆ.15: ಆಮ್ ಆದ್ಮಿ ಪಾರ್ಟಿ (ಆಪ್) ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಝಾರೆಯವರ ‘ಇಂಡಿಯಾ ಅಗೇನ್‌ಸ್ಟ್ ಕರಪ್ಶನ್(ಐಎಸಿ) ’ಆಂದೋಲನದ ವಿರುದ್ಧ ಮಂಗಳವಾರ ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು,ಪ್ರಜಾಪ್ರಭುತ್ವವನ್ನು ಬುಡಮೇಲುಗೊಳಿಸುವ ಮತ್ತು ಯುಪಿಎ ಸರಕಾರವನ್ನು ಪದಚ್ಯುತಗೊಳಿಸುವ ಬಿಜೆಪಿ ಮತ್ತು ಆರೆಸ್ಸೆಸ್ ಪ್ರಯತ್ನದಲ್ಲಿ ಆಪ್ ಮತ್ತು ಐಎಸಿ ಅವುಗಳ ಪ್ರತಿನಿಧಿಗಳಾಗಿ ಕೆಲಸ ಮಾಡಿದ್ದವು ಎಂದು ದೂರಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಆಪ್‌ನ ಸ್ಥಾಪಕ ಸದಸ್ಯ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಅವರ ಹೇಳಿಕೆಗಳಿಗೆ ರಾಹುಲ್ ಸಹಮತ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಮತ್ತು ಆರೆಸ್ಸಸ್ ಹಝಾರೆಯವರ ಆಂದೋಲನಕ್ಕೆ ಪ್ರೇರಣೆ ನೀಡಿದ್ದವು ಎಂದು ಭೂಷಣ್ ಹೇಳಿದ್ದರು.

‘ನಮಗೆ ಗೊತ್ತಿದ್ದನ್ನು ಪ್ರಶಾಂತ್  ಭೂಷಣ್ ದೃಢಪಡಿಸಿದ್ದಾರೆ. ಪ್ರಜಾಪ್ರಭುತ್ವವನ್ನು ಬುಡಮೇಲುಗೊಳಿಸಲು ಮತ್ತು ಯುಪಿಎ ಸರಕಾರವನ್ನು ಪದಚ್ಯುತಗೊಳಿಸಲು ಬಿಜೆಪಿ ಮತ್ತು ಆರೆಸ್ಸೆಸ್ ಐಎಸಿ ಆಂದೋಲನ ಮತ್ತು ಆಪ್‌ಗೆ ಕುಮ್ಮಕ್ಕು ನೀಡಿದ್ದವು ’ಎಂದು ಹಾಲಿ ಅಮೆರಿಕದಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಿರುವ ಸೋನಿಯಾ ಗಾಂಧಿಯವರ ಜೊತೆಯಲ್ಲಿರುವ ರಾಹುಲ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News