ಮುಸ್ಲಿಂ ಸಮುದಾಯದ ನಿಂದನೆ ಉದ್ದೇಶ ಸ್ಪಷ್ಟ ಎಂದ ನ್ಯಾಯಪೀಠ: ಸುದರ್ಶನ್ ಟಿವಿ ಕಾರ್ಯಕ್ರಮ ಪ್ರಸಾರಕ್ಕೆ ಸುಪ್ರೀಂ ತಡೆ

Update: 2020-09-15 14:35 GMT

ಹೊಸದಿಲ್ಲಿ, ಸೆ.15: ಸುದರ್ಶನ್ ಟಿವಿಯ ‘ಬಿಂದಾಸ್ ಬೋಲ್’ ಕಾರ್ಯಕ್ರಮದ ಪ್ರಸಾರಕ್ಕೆ ತಡೆಯಾಜ್ಞೆ ವಿಧಿಸಿರುವ ಸುಪ್ರೀಂಕೋರ್ಟ್, ಈ ಕಾರ್ಯಕ್ರಮ ಮುಸ್ಲಿಮ್ ಸಮುದಾಯವನ್ನು ನಿಂದಿಸುವ ಉದ್ದೇಶ ಹೊಂದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೇಳಿದೆ. ಇದೊಂದು ಅತಿರೇಕದ, ವಿಕ್ಷಿಪ್ತ ಕಾರ್ಯಕ್ರಮವಾಗಿದೆ ಎಂದು ನ್ಯಾಯಾಧೀಶ ಡಿವೈ ಚಂದ್ರಚೂಡ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿತಲ್ಲದೆ ಮಂಗಳವಾರ ಮತ್ತು ಬುಧವಾರದ ಸಂಚಿಕೆಯನ್ನು ಪ್ರಸಾರಮಾಡಬಾರದು ಎಂದು ಸೂಚಿಸಿ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿದೆ.

ಒಂದು ಸಮುದಾಯವನ್ನು ಗುರಿಯಾಗಿಸುವಂತಿಲ್ಲ ಮತ್ತು ಅವರನ್ನು ನಿರ್ದಿಷ್ಟ ರೀತಿಯಲ್ಲಿ ಬ್ರ್ಯಾಂಡ್ ಮಾಡಬಾರದು. ದೃಶ್ಯ ಮಾಧ್ಯಮಗಳ ಸಮಸ್ಯೆಯೆಂದರೆ ಅವರಿಗೆ ಟಿಆರ್‌ಪಿ ಮುಖ್ಯ ಮತ್ತು ಸುದ್ದಿಯನ್ನು ವೈಭವೀಕರಿಸುವುದಕ್ಕೆ ಆದ್ಯತೆ ನೀಡುವುದು. ಸಮುದಾಯವನ್ನು ಗುರಿಯಾಗಿಸುವಲ್ಲಿ, ಒಬ್ಬರ ವ್ಯಕ್ತಿತ್ವ, ಘನತೆಗೆ ಕುಂದುಂಟು ಮಾಡುವಲ್ಲಿ ದೃಶ್ಯಮಾಧ್ಯಮಗಳಿಗೆ ಅಗಾಧ ಶಕ್ತಿಯಿದೆ ಎಂದು ನ್ಯಾಯಪೀಠ ಹೇಳಿದೆ. ಮುಸ್ಲಿಮರು ಸರಕಾರಿ ಸೇವೆಗಳಿಗೆ ನುಸುಳಿದ್ದಾರೆ ಎಂಬ ಸಂದೇಶ ನೀಡುವ ಈ ಕಾರ್ಯಕ್ರಮ ತುಂಬಾ ಪ್ರಚೋದನಾತ್ಮಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ನ್ಯಾಯಪೀಠ, ಈ ಮೂಲಕ ಯುಪಿಎಸ್‌ಸಿ ಪರೀಕ್ಷೆಯ ಬಗ್ಗೆಯೂ ಪ್ರಶ್ನಾರ್ಥಕ ಚಿಹ್ನೆ ಮೂಡುವಂತಾಗಿದೆ. ಮುಕ್ತ ಸಮಾಜದಲ್ಲಿ ಈ ರೀತಿಯ ಕಾರ್ಯಕ್ರಮ ಪ್ರಸಾರಕ್ಕೆ ಅವಕಾಶ ನೀಡುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಇಂದು ಮಲ್ಹೋತ್ರ ಹಾಗೂ ಕೆಎಂ ಜೋಸೆಫ್ ನ್ಯಾಯಪೀಠದ ಇತರ ಸದಸ್ಯರಾಗಿದ್ದಾರೆ. ಈ ಕಾರ್ಯಕ್ರಮವು ರಾಷ್ಟ್ರೀಯ ಭದ್ರತೆಯ ಕುರಿತ ತನಿಖಾ ವರದಿ ಎಂದು ಸುದ್ಧಿವಾಹಿನಿ ಪರಿಗಣಿಸಿದೆ ಎಂದು ಸುದರ್ಶನ್ ಟಿವಿಯ ಪ್ರತಿನಿಧಿ, ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿಮ್ಮ ಕಕ್ಷಿದಾರರು ದೇಶಕ್ಕೆ ಹಾನಿಯುಂಟು ಮಾಡುತ್ತಿದ್ದಾರೆ ಮತ್ತು ಭಾರತವು ವೈವಿಧ್ಯಮಯ ಸಂಸ್ಕೃತಿಯ ಸಂಗಮಸ್ಥಳವಾಗಿದೆ ಎಂಬುದನ್ನು ಒಪ್ಪುತ್ತಿಲ್ಲ. ನಿಮ್ಮ ಕಕ್ಷಿದಾರರು ತಮ್ಮ ಸ್ವಾತಂತ್ರ್ಯವನ್ನು ಎಚ್ಚರಿಕೆಯಿಂದ ಪ್ರಯೋಗಿಸಬೇಕಾಗಿದೆ ಎಂದು ಹೇಳಿತು. ಮಾಧ್ಯಮದಲ್ಲಿ ಸ್ವಯಂನಿಯಂತ್ರಣದ ಅಗತ್ಯವಿದೆ. ಟಿವಿ ವಾಹಿನಿಗಳ ಆದಾಯದ ಸ್ವರೂಪ ಮತ್ತು ಮಾಲಕತ್ವದ ವಿವರದ ಮಾಹಿತಿಯನ್ನು ಬಹಿರಂಗಪಡಿಸಬೇಕು. ಈ ಬಗ್ಗೆ ಸಾಲಿಸಿಟರ್ ಜನರಲ್‌ರಿಂದ ವಿವರಣೆ ಪಡೆಯುವುದಾಗಿ ನ್ಯಾಯಪೀಠ ಹೇಳಿತು.

ಮುಸ್ಲಿಮರನ್ನು ಸರಕಾರಿ ಸೇವೆಯೊಳಗೆ ನುಗ್ಗಿಸುವ ಬೃಹತ್ ಷಡ್ಯಂತ್ರ ನಡೆದಿದ್ದು ಈ ಬಗ್ಗೆ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುವುದಾಗಿ ಸುದರ್ಶನ್ ಟಿವಿ ಹೇಳಿಕೊಂಡಿತ್ತು. ಈ ಕಾರ್ಯಕ್ರಮದ ಪ್ರಸಾರ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ದಿಲ್ಲಿ ಹೈಕೋರ್ಟ್ ತಳ್ಳಿ ಹಾಕಿತ್ತು. ಇದನ್ನು ಪ್ರಶ್ನಿಸಿ ನ್ಯಾಯವಾದಿ ಫಿರೋಝ್ ಇಕ್ಬಾಲ್ ಖಾನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News