ದ.ಕ. ಜಿಲ್ಲೆ : ಕೋವಿಡ್‌ಗೆ ಐವರು ಬಲಿ, 316 ಮಂದಿಗೆ ಕೊರೋನ ಸೋಂಕು

Update: 2020-09-15 14:24 GMT

ಮಂಗಳೂರು, ಸೆ.15: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಮಂಗಳವಾರ ಮತ್ತೆ ಐವರು ಮೃತಪಟ್ಟಿದ್ದಾರೆ. ಹೊಸದಾಗಿ 316 ಮಂದಿಗೆ ಸೋಂಕು ತಗುಲಿದೆ.

ಮೃತರಲ್ಲಿ ಮಂಗಳೂರು ತಾಲೂಕಿನ ಮೂವರು, ಬಂಟ್ವಾಳ ಹಾಗೂ ಪುತ್ತೂರು ತಾಲೂಕಿನ ತಲಾ ಓರ್ವರು ಇದ್ದಾರೆ. ಮೃತರು ವಿವಿಧ ರೋಗಗಳಿಂದ ಬಳಲುತ್ತಿದ್ದರು. ಜೊತೆಗೆ ಕೊರೋನ ಸೋಂಕೂ ತಗುಲಿತ್ತು. ಜಿಲ್ಲೆಯಲ್ಲಿ ಮೃತರ ಸಂಖ್ಯೆ 452ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

316 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಕೊರೋನ ಸೋಂಕು ಹಿಡಿತಕ್ಕೆ ಬಾರದೇ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ದಿನಂಪ್ರತಿ 400ರ ಆಸುಪಾಲಿನಲ್ಲಿದ್ದ ಸೋಂಕಿತರ ಸಂಖ್ಯೆ 300ರ ಗಡಿಗೆ ಇಳಿಕೆಯಾದರೂ ಏರಿಳಿತ ಮುಂದುವರಿದಿದೆ. ಮಂಗಳವಾರ ಹೊಸದಾಗಿ 316 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಇದರಲ್ಲಿ ಸಾಮಾನ್ಯ ಶೀತ ಲಕ್ಷಣ (166) ಹೊಂದಿದವರ ಸಂಖ್ಯೆಯೇ ಅಧಿಕವಿದೆ. ಇನ್ನು, ಸೋಂಕಿತರ ಸಂಪರ್ಕದಲ್ಲಿದ್ದ 108, ತೀವ್ರ ಉಸಿರಾಟ ತೊಂದರೆಯ 11 ಮಂದಿಗೆ ಸೋಂಕು ತಗುಲಿದೆ. ಇನ್ನು 31 ಮಂದಿಗೆ ಸೋಂಕು ಹೇಗೆ ಬಂದಿದೆ ಎನ್ನುವುದು ತಿಳಿದುಬಂದಿಲ್ಲ.

117 ಪುರುಷರು ಹಾಗೂ 69 ಮಹಿಳೆಯರು ಸೇರಿದಂತೆ 186 ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಇನ್ನು, 62 ಪುರುಷರು, 68 ಮಹಿಳೆಯರು ಸಹಿತ 130 ಮಂದಿಯಲ್ಲಿ ಯಾವುದೇ ತೆರನಾದ ಕೊರೋನ ಲಕ್ಷಣಗಳು ಕಂಡುಬಂದಿಲ್ಲ. ಮಂಗಳೂರು ತಾಲೂಕಿನಲ್ಲೇ ಅತಿಹೆಚ್ಚು ಸೋಂಕು ಪ್ರಕರಣಗಳು (148) ಕಂಡುಬಂದಿವೆ. ಬಂಟ್ವಾಳ-44, ಪುತ್ತೂರು-42, ಸುಳ್ಯ-20, ಬೆಳ್ತಂಗಡಿ-37, ಹೊರಜಿಲ್ಲೆಯ 25 ಮಂದಿಯ ವರದಿ ಪಾಸಿಟಿವ್ ಆಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 18,092ಕ್ಕೆ ಏರಿಕೆಯಾಗಿದೆ.

322 ಮಂದಿ ಗುಣಮುಖ: ಆರೋಗ್ಯಕರ ಬೆಳವಣಿಗೆಯಲ್ಲಿ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಆಶಾದಾಯಕವಾಗಿದೆ. ಮಂಗಳವಾರವೂ 322 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 202, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ 120 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಸೋಂಕಿನಿಂದ ಮುಕ್ತಿ ಪಡೆದವರ ಸಂಖ್ಯೆ 13,606ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 4,034 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News