ಹಿರಿಯಡ್ಕ : ಆರೋಗ್ಯ ಕಾರ್ಯಕರ್ತರಿಗೆ ಚಪ್ಪಲಿ ಹಾರ ಹಾಕಲು ಯತ್ನ ಪ್ರಕರಣ; ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಿ ಸೆರೆ

Update: 2020-09-15 14:54 GMT

ಹಿರಿಯಡ್ಕ, ಸೆ.15: ಕೋವಿಡ್-19 ಕರ್ತವ್ಯಕ್ಕೆ ತೆರಳಿದ್ದ ಆರೋಗ್ಯ ಕಾರ್ಯ ಕರ್ತರಿಗೆ ಹಲ್ಲೆ ಮತ್ತು ಚಪ್ಪಲಿ ಹಾರ ಹಾಕಲು ಯತ್ನಿಸಿ, ದ್ವಿಚಕ್ರ ವಾಹನ ಜಖಂಗೊಳಿಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ಬೆಳ್ಳಂಪಳ್ಳಿ ಸಮೀಪದ ಪುಂಚೂರು ಕಂಬ್ಲಮಜಲು ಎಂಬಲ್ಲಿ ಸೆ.14ರಂದು ಸಂಜೆ ವೇಳೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕಂಬ್ಲಮಜಲು ನಿವಾಸಿ ಸುರೇಂದ್ರ(43) ಎಂಬಾತನನ್ನು ಹಿರಿಯಡ್ಕ ಪೊಲೀಸರು ಅದೇ ದಿನ ಸಂಜೆ ಬಂಧಿಸಿದ್ದು, ಇಂದು ಸಂಜೆ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸುರೇಂದ್ರನ ಪತ್ನಿಗೆ ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಪತಿ ಸುರೇಂದ್ರನ ಗಂಟಲು ದ್ರವ ಪರೀಕ್ಷೆಗಾಗಿ ಬೆಳ್ಳಂಪಳ್ಳಿ ಉಪಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ವಸಂತಿ, ಲ್ಯಾಬ್ ಸಿಬ್ಬಂದಿ ಜ್ಯೋತಿ ಕಿರಣ್, ಸಿಬ್ಬಂದಿ ಪ್ರತಿಮಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಕಲಾವತಿ, ಕಾರು ಚಾಲಕ ಸಂತೋಷ್, ಆಶಾ ಕಾರ್ಯಕರ್ತೆ ವಿಜಯ ಎಂಬವರು ತೆರಳಿದ್ದರು.

ಈ ಸಂದರ್ಭ ಸುರೇಂದ್ರ, ಆರೋಗ್ಯ ಕಾರ್ಯಕರ್ತೆಯರಿಗೆ ಅವಾಚ್ಯ ಶಬ್ದಗಳಿಂದ ಬೈದು ಚಪ್ಪಲಿ ಹಾರವನ್ನು ಹಾಕಲು ಯತ್ನಿಸಿದ ಎನ್ನಲಾಗಿದೆ. ನಂತರ ಕಬ್ಬಿಣದ ರಾಡ್ ಹಿಡಿದುಕೊಂಡು ಬಂದಾಗ ಇವರೆಲ್ಲ ಸಮೀಪದ ಮನೆ ಒಳಗೆ ಓಡಿ ಹೋದರು. ಬಳಿಕ ಆತ ಅಲ್ಲೇ ನಿಲ್ಲಿಸಿದ್ದ ವಸಂತಿ ಅವರ ದ್ವಿಚಕ್ರ ವಾಹನಕ್ಕೆ ರಾಡ್‌ನಿಂದ ಹೊಡೆದು ಹಾನಿಗೊಳಿಸಿದನು ಎಂದು ದೂರಲಾಗಿದೆ.

ಈ ವೇಳೆ ಗ್ರಾಮಸ್ಥರು ಸೇರಿದಾಗ ಆತ, ಆರೋಗ್ಯ ಕಾರ್ಯಕರ್ತರಿಗೆ ಕೊಲೆ ಮಾಡುವುದಾಗಿ ಜೀವ ಬೆದರಿಕೆಯೊಡ್ಡಿ ಮನೆ ಒಳಗೆ ಹೋದನು. ಹೀಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಹಾಗೂ ಹಲ್ಲೆಗೆ ಯತ್ನಿಸಿದ ಮತ್ತು ದ್ವಿಚಕ್ರ ವಾಹನ ಜಖಂಗೊಳಿಸಿ 10 ಸಾವಿರ ರೂ. ನಷ್ಟ ಉಂಟು ಮಾಡಿರುವ ಸುರೇಂದ್ರ ವಿರುದ್ಧ ಕ್ರಮ ಜರಗಿಸುವಂತೆ ವಸಂತಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News