ಮರಳು ಮಾಫಿಯಾ ತಡೆಗಟ್ಟಲು ಶಾಸಕರು ವಿಫಲ: ಮೊಯ್ದಿನ್ ಬಾವ ಆರೋಪ

Update: 2020-09-15 15:21 GMT

ಮಂಗಳೂರು, ಸೆ.15: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಸಾಗಾಟವು ಹೆಚ್ಚುತ್ತಿದ್ದು, ಶಾಸಕರಿಗೆ ಪೂರ್ಣ ಮಾಹಿತಿ ಇದ್ದರೂ ಕೂಡ ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಮೊಯ್ದಿನ್ ಬಾವ ಆರೋಪಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೈಕಂಪಾಡಿ, ತಣ್ನೀರುಬಾವಿ, ನಾಯರ್ ಕುದ್ರು, ಮೀನಕಳಿಯ, ಅಡ್ಯಾರ್, ಪಡೀಲ್, ಅದ್ಯಪಾಡಿ ಮೊದಲಾದ ಕಡೆ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ. ಶಾಸಕರು ವೌನ ವಹಿಸಿರುವುದನ್ನು ಗಮನಿಸಿದಾಗ ಅವರ ಕೈವಾಡವೂ ಇದರಲ್ಲಿದೆ ಎನ್ನುವ ಸಂದೇಹ ವ್ಯಕ್ತವಾಗುತ್ತದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.

ಹಾಲಿ ಶಾಸಕರಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಪಚ್ಚನಾಡಿ ಸಂತೋಷ ನಗರದಲ್ಲಿ ಪ್ರತಿ ದಿನ ಕುಡಿಯುವ ನೀರು ಸಿಗದಂತಾ ಗಿದೆ. ಕ್ಷೇತ್ರದ ಶಾಸಕರು ಹಾಗು ಕಾರ್ಪೋರೇಟರ್‌ಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಪಚ್ಚನಾಡಿಯಲ್ಲಿ ಸರಕಾರಿ ಸ್ಥಳದಲ್ಲಿ ಅನಧಿಕೃತವಾಗಿ ಮನೆ ಕಟ್ಟಿದರೂ ಶಾಸಕರು ಚಕಾರ ಎತ್ತಿಲ್ಲ. ಕಾಂಗ್ರೆಸ್ ಮತ್ತು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಕಾರಣ ಸ್ಥಗಿತವಾಗಿದೆ ಎಂದರು.

ಆರ್ಥಿಕ ಕುಸಿತದಿಂದ ಬೈಕಂಪಾಡಿ ಕೈಗಾರಿಕೆಗಳು ಭಾಗಶಃ ಮುಚ್ಚಿವೆ. ಸಾವಿರಾರು ಜನ ನಿರುದ್ಯೋಗಿಗಳಾಗಿದ್ದಾರೆ. ಜನ ಬದುಕಲು ಕಷ್ಟ ಪಡುತ್ತಿದ್ದಾರೆ. ಆದರೆ ಶಾಸಕರು ಈ ಬಗ್ಗೆ ಮಾತನಾಡುತ್ತಿಲ್ಲ. ಮರಳು ಮಾಫಿಯಾದ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೊಯ್ದಿನ್ ಬಾವ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಶೆಟ್ಟಿ, ಮನಪಾ ಸದಸ್ಯ ಅನಿಲ್, ಜಿಪಂ ಮಾಜಿ ಸದಸ್ಯ ಮೆಲ್ವಿನ್ ಡಿಸೋಜ, ಉಮೇಶ್ ದಂಡಕೇರಿ ಉಪಸ್ಥಿತರಿದ್ದರು...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News