ಪಂಜಾಬ್: ಮಾಜಿ ಡಿಐಜಿಗೆ ಬಂಧನದಿಂದ ರಕ್ಷಣೆ ಮಂಜೂರುಗೊಳಿಸಿದ ಸುಪ್ರೀಂ

Update: 2020-09-15 15:35 GMT

ಹೊಸದಿಲ್ಲಿ, ಸೆ.15: 1991ರಲ್ಲಿ ನಡೆದಿದ್ದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಪೊಲೀಸ್‌ನ ಮಾಜಿ ಮಹಾನಿರ್ದೇಶಕ ಸುಮೇಧ್ ಸಿಂಗ್ ಸೈನಿಯನ್ನು ಮುಂದಿನ ಆದೇಶದವರೆಗೆ ಬಂಧಿಸುವಂತಿಲ್ಲ ಮತ್ತು ಸೈನಿ ಪ್ರಕರಣದ ತನಿಖೆಯಲ್ಲಿ ಸಹಕರಿಸಬೇಕು ಎಂದು ಸುಪ್ರೀಂಕೋರ್ಟ್ ಮಂಗಳವಾರ ಸೂಚಿಸಿದೆ.

ಚಂಡೀಗಢ ಕೈಗಾರಿಕಾ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ ಜ್ಯೂನಿಯರ್ ಇಂಜಿನಿಯರ್ ಆಗಿದ್ದ ಬಲ್ವಂತ್ ಸಿಂಗ್ ಮುಲ್ತಾನಿಯನ್ನು 1991ರಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದರು. ಪೊಲೀಸ್ ಅಧಿಕಾರಿ ಸೈನಿಯ ಮೇಲೆ ನಡೆದಿದ್ದ ಭಯೋತ್ಪಾದಕರ ದಾಳಿಯಲ್ಲಿ ಮುಲ್ತಾನಿ ಕೈವಾಡವಿದೆ ಎಂಬ ಆರೋಪದಲ್ಲಿ ಬಂಧಿಸಲಾಗಿತ್ತು. ಆದರೆ ಮುಲ್ತಾನಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಈ ಮಧ್ಯೆ, ಮುಲ್ತಾನಿ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆಯಿಂದ ಮೃತಪಟ್ಟಿದ್ದಾರೆ ಎಂದು ಮುಲ್ತಾನಿ ಸಹೋದರ ನೀಡಿದ ದೂರಿನಂತೆ ಸೈನಿ ಹಾಗೂ ಇತರ 6 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಎಫ್‌ಐಆರ್ ರದ್ದುಗೊಳಿಸಿ, ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಸೈನಿ ಸಲ್ಲಿಸಿದ್ದ ಅರ್ಜಿಯನ್ನು ಪಂಜಾಬ್ ಮತ್ತು ಹರ್ಯಾಣ ನ್ಯಾಯಾಲಯ ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂಕೋರ್ಟ್, 29 ವರ್ಷದ ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯನ್ನು ಬಂಧಿಸಲು ಈಗ ಯಾಕೆ ಇಷ್ಟೊಂದು ತರಾತುರಿ ಎಂದು ಪ್ರಶ್ನಿಸಿತು ಮತ್ತು ಮುಂದಿನ ಆದೇಶದವರೆಗೆ ಸೈನಿಯನ್ನು ಬಂಧಿಸಬಾರದು ಎಂದು ತಿಳಿಸಿತು. ಅಲ್ಲದೆ ಸೈನಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗೆ 2 ವಾರದೊಳಗೆ ಪ್ರತಿಕ್ರಿಯಿಸುವಂತೆ ಪಂಜಾಬ್ ಸರಕಾರಕ್ಕೆ ಸೂಚಿಸಿ ವಿಚಾರಣೆಯನ್ನು 4 ವಾರ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News