​ಕುವೈತ್‌ನಲ್ಲಿ ಉಡುಪಿಯ ಮಹಿಳೆ ಸಿಐಡಿ ವಶಕ್ಕೆ

Update: 2020-09-15 17:06 GMT

ಮಂಗಳೂರು, ಸೆ.15: ಕುವೈತ್‌ನಲ್ಲಿ ಮನೆಗೆಲಸ ಮಾಡುತ್ತಿದ್ದ ಕರಾವಳಿಯ ಉಡುಪಿ ಮೂಲದ ಮಹಿಳೆಯನ್ನು ಕುವೈತ್‌ನ ಸಿಐಡಿ ಪೊಲೀಸರು ಸೋಮವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

ಮಹಿಳೆಯು ತಾಯ್ನಡಿಗೆ ವಾಪಸಾಗಲು ಮುಂದಾಗಿದ್ದರು. ವಿಮಾನ ನಿಲ್ದಾಣದ ಬೋರ್ಡಿಂಗ್ ಕ್ಲಿಯರ್ ಆಗಿತ್ತು. ಎಮಿಗ್ರೆಷನ್ ಕ್ಲಿಯರೆನ್ಸ್ ವೇಳೆ ಹಠಾತ್ತನೆ ಅಲ್ಲಿನ ಪೊಲೀಸರು ಈಕೆಯನ್ನು ವಶಕ್ಕೆ ಪಡೆದಿದ್ದಾರೆ.

‘ಎಮಿಗ್ರೆಷನ್ ಕ್ಲಿಯರೆನ್ಸ್ ಬಾಕಿ ಇದೆ. ಆದರೆ ಏನೋ ಸಮಸ್ಯೆಯಾಗಿದೆ ಎಂದಷ್ಟೆ ತಿಳಿಸಿದ್ದರು. ಆ ಬಳಿಕ ಆಕೆಯ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ’ ಎಂದು ಮಹಿಳೆಯ ಪುತ್ರಿ ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟ ಆಡಿಯೋ ಮಾತುಗಳಲ್ಲಿ ಮನವಿ ಮಾಡಿದ್ದಾರೆ.

ಈ ವಿಚಾರ ತಿಳಿದ ಕುವೈತ್ ಕರ್ನಾಟಕ ಮುಸ್ಲಿಂ ಅಸೋಸಿಯೇಷನ್ ಕರ್ನಾಟಕ ಚಾಪ್ಟರ್‌ನ ಲತೀಫ್ ಮತ್ತು ಉದ್ಯಮಿ ಮೋಹನದಾಸ ಕಾಮತ್ ಅವರು ಮಂಗಳವಾರ ಕುವೈತ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದರು. ಆಗ ಮಹಿಳೆಯು ಅಲ್ಲಿನ ಪೊಲೀಸರ ವಶದಲ್ಲಿ ಇರುವುದು ಪತ್ತೆಯಾಗಿತ್ತು.

ಇದೀಗ ಮಹಿಳೆಯ ಪುತ್ರಿಯು ಅನಿವಾಸಿ ಭಾರತೀಯ ಫೋರಮ್ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರಿಗೆ ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ. ಅವರು ಕುವೈತ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ತೊಂದರೆ ನಿವಾರಿಸುವಂತೆ ಕೋರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News