ಈಗ ಸ್ವತಂತ್ರವಾಗಿ ಉಸಿರಾಡಬಲ್ಲೆ: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ

Update: 2020-09-15 17:24 GMT

ಬರ್ಲಿನ್ (ಜರ್ಮನಿ), ಸೆ. 15: ವಿಷಪ್ರಾಶನಕ್ಕೊಳಗಾಗಿ ಜರ್ಮನಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ ರಶ್ಯಕ್ಕೆ ಹಿಂದಿರುಗಲಿದ್ದಾರೆ ಎಂದು ಅವರ ವಕ್ತಾರೆ ಕಿರಾ ಯಾರ್ಮಿಶ್ ಹೇಳಿದ್ದಾರೆ.

‘‘ಅವರು ರಶ್ಯಕ್ಕೆ ಹಿಂದಿರುಗುವುದಿಲ್ಲವೆಂದು ಯಾರಾದರೂ ಯಾಕೆ ಭಾವಿಸಬೇಕು ಎನ್ನುವುದು ನನಗೆ ಅರ್ಥವಾಗುತ್ತಿಲ್ಲ’’ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ.

ವಿಷಪ್ರಾಶನಕ್ಕೊಳಗಾದ ಬಳಿಕ ಮೊದಲ ಬಾರಿಗೆ ನವಾಲ್ನಿ ಕೂಡ ಚಿತ್ರವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ. ನಾನು ಈಗ ಕೃತಕ ಉಸಿರಾಟ ವ್ಯವಸ್ಥೆಯಿಲ್ಲದೆ ಸ್ವತಂತ್ರವಾಗಿ ಉಸಿರಾಡಬಲ್ಲೆ ಎಂದು ಅವರು ಹೇಳಿದ್ದಾರೆ.

ಆಗಸ್ಟ್ 20ರಂದು ಸೈಬೀರಿಯದಿಂದ ಮಾಸ್ಕೋಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಅವರು ದಿಢೀರನೆ ಅಸ್ವಸ್ಥರಾಗಿದ್ದರು. ಮೊದಲು ಅವರನ್ನು ಸೈಬೀರಿಯದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಬರ್ಲಿನ್‌ಗೆ ವಿಮಾನ ಆ್ಯಂಬುಲೆನ್ಸ್ ಮೂಲಕ ಸ್ಥಳಾಂತರಿಸಲಾಗಿತ್ತು.

 ಅವರ ಮೇಲೆ ನೊವಿಚೊಕ್ ನರ್ವ್ ಏಜಂಟ್ ಎಂಬ ಮಾರಕ ರಾಸಾಯನಿಕ ಪ್ರಯೋಗವಾಗಿರುವುದು ಪ್ರಯೋಗಾಲಯಗಳಲ್ಲಿ ನಡೆದ ಪರೀಕ್ಷೆಯಲ್ಲಿ ಸಾಬೀತಾಗಿದೆ ಎಂದು ಜರ್ಮನಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News