ಹರೇಕಳ ಹಾಜಬ್ಬರ ಪ್ರಶಸ್ತಿ-ಫಲಕ ಜೋಡಿಸಿಡಲು ಪ್ರತ್ಯೇಕ ಕೋಣೆ

Update: 2020-09-15 17:40 GMT

ಮಂಗಳೂರು, ಸೆ.15: ನಾಡಿನ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಕಾರಿಗಳು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಮೇಲಿರುವ ಪ್ರೀತಿಯ ದ್ಯೋತಕವಾಗಿ, ಅವರು ಸಲ್ಲಿಸಿದ ಸೇವೆಗಾಗಿ ನೀಡಲಾದ ಪ್ರಶಸ್ತಿ-ಫಲಕಗಳ ಪೈಕಿ ಕೆಲವನ್ನು ಮನೆಯೊಳಗೆ ಜೋಡಿ ಸಿಟ್ಟರೂ ಕೂಡ ಸ್ಥಳಾವಕಾಶದ ಕೊರತೆಯಿಂದ ನೆಲದಲ್ಲಿ ರಾಶಿಬಿದ್ದಿರುವ ಬಹುತೇಕ ಪ್ರಶಸ್ತಿ-ಫಲಕಗಳಿಗೆ ಇದೀಗ ಮುಕ್ತಿಯ ಭಾಗ್ಯ ಸಿಗಲಿದ್ದು, ಈ ಪ್ರಶಸ್ತಿ ಲಕಗಳನ್ನು ಜೋಡಿಸಿಡಲು ಪ್ರತ್ಯೇಕ ಕೋಣೆ ಸಿದ್ಧವಾಗಿದೆ. ಅಷ್ಟೇ ಅಲ್ಲ, ಅವುಗಳ ಪ್ರದರ್ಶನಕ್ಕೆ ಪ್ರತ್ಯೇಕ ಮ್ಯೂಸಿಯಂ ಮಾದರಿಯ ಪುಟ್ಟ ಶೋಕೇಸ್ ನಿರ್ಮಾಣವಾಗಲಿದೆ.

ವರ್ಷದ ಹಿಂದೆ ಅಂದರೆ 2019ರ ಅ.1ರಂದು ಹಿರಿಯ ನಾಗರಿಕರ ‘ಏಜ್-ಮಂಗಳೂರು’ ಸಂಸ್ಥೆಯು ಹರೇಕಳ ಹಾಜಬ್ಬರಿಗೆ ಗೌರವ ಸಲ್ಲಿಸುವ ಸಂದರ್ಭ ಆ ಪುಟ್ಟ ಮನೆಯಲ್ಲಿ ರಾಶಿಬಿದ್ದ ಪ್ರಶಸ್ತಿ-ಲಕಗಳನ್ನು ಕಂಡು ಸುಂದರವಾದ ಶೋಕೇಸ್ ನಿರ್ಮಿಸಿ ಕೊಡುವ ವಾಗ್ದಾನ ನೀಡಿತ್ತು.

ಆದರೆ ತನ್ನ ಮನೆಯಲ್ಲೇ ಸುಂದರವಾದ ಶೋಕೇಸ್ ನಿರ್ಮಿಸಿದರೆ ತನ್ನ ನಂತರ ಅದು ಶಾಶ್ವತವಾಗಿ ಉಳಿಯುವ ಬಗ್ಗೆ ಖಚಿತವಿಲ್ಲದ ಹಾಜಬ್ಬ ಮನೆಯ ಮುಂದೆಯೇ ಪ್ರತ್ಯೇಕ ಕಟ್ಟಡ ನಿರ್ಮಿಸಲು ಮುಂದಾದರು. ಅದರಂತೆ ತನ್ನಲ್ಲಿದ್ದ ಸುಮಾರು 1.30 ಲಕ್ಷ ರೂ. ವ್ಯಯಿಸಿ ಮಗ ಇಸ್ಮಾಯೀಲ್‌ರ ಸಹಾಯದಿಂದ ಕೆಂಪು ಕಲ್ಲಿನ ಗೋಡೆ ಕಟ್ಟಿಸಿ ಕಾಂಕ್ರಿಟ್ ಸ್ಲಾಬ್ ಮತ್ತು ಕಬ್ಬಿಣದ ಬಾಗಿಲು ಅಳವಡಿಸಿದ್ದಾರೆ. ಆದರೆ ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಮ್ಯೂಸಿಯಂ ಮಾದರಿಯ ಶೋಕೇಸ್ ನಿರ್ಮಾಣ ಸಹಿತ ಪ್ರತ್ಯೇಕ ಕೋಣೆಯ ಉದ್ಘಾಟನೆಯ ಭಾಗ್ಯವು ಮುಂದೂಡಲ್ಪಡುತ್ತಿವೆ.

ಅಂದಹಾಗೆ ಹರೇಕಳ ಹಾಜಬ್ಬರಿಗೆ 10ಕ್ಕೂ ಅಕ ಪ್ರಮುಖ ಪ್ರಶಸ್ತಿಗಳು, 500ಕ್ಕೂ ಅಕ ಗೌರವ ಸನ್ಮಾನಗಳು, ಸಾವಿರಕ್ಕೂ ಅಕ ಕಡೆ ಅತಿಥಿಯಾಗಿ ತೆರಳಿ ಸ್ವೀಕರಿಸಲಾದ ಸನ್ಮಾನ ಪತ್ರಗಳು ಮನೆಯೊಳಗೆ ಕಾಣಬಹುದಾಗಿದೆ. ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾದ ಬಳಿಕವಂತೂ ಹಾಜಬ್ಬ ಅವರ ಮನೆಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿವೆ. ಭವಿಷ್ಯದಲ್ಲಿ ಹಾಜಬ್ಬ ಅವರನ್ನು ನಾಡಿನ ಶಾಲಾ ಮಕ್ಕಳಿಗೆ ಪರಿಚಯಿಸಿಕೊಡುವ ಸಂದರ್ಭ ಅವರಿಗೆ ಲಭಿಸಿದ ಪ್ರಶಸ್ತಿ-ಫಲಕಗಳು ಅಲ್ಲಲ್ಲಿ ರಾಶಿ ಹಾಕುವ ಬದಲು ಒಂದೆಡೆ ಜೋಡಿಸಿಟ್ಟರೆ ಅವುಗಳನ್ನು ಮ್ಯೂಸಿಯಂ ಆಗಿ ಬಳಸುವ ದೂರದೃಷ್ಟಿಯೂ ‘ಏಜ್ ಮಂಗಳೂರು’ ಸಂಸ್ಥೆಗೆ ಇವೆ.

1994ರಲ್ಲಿ ಇಂದಿರಾ ಆವಾಸ್ ಯೋಜನೆಯಡಿ ಹರೇಕಳದ ನ್ಯೂಪಡ್ಪು ಎಂಬಲ್ಲಿ ಹಾಜಬ್ಬರ ಮನೆ ನಿರ್ಮಿಸಲಾಗಿತ್ತು. ಅದಕ್ಕೆ ಪಜೀರ್‌ನ ಚರ್ಚ್ ವತಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಆ ಮನೆ ಸೋರುತ್ತಿದ್ದ ಕಾರಣ ರಾಶಿಬಿದ್ದ ಪ್ರಶಸ್ತಿ ಫಲಕಗಳು ನೀರು ಪಾಲಾಗುತ್ತಿತ್ತು. ಈ ಬಗ್ಗೆ ತಿಳಿದುಕೊಂಡ ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ಟಿಆರ್‌ಫ್) ಮನೆ ದುರಸ್ತಿಪಡಿಸಿ, ಪ್ರಶಸ್ತಿಗಳನ್ನು ಜೋಡಿಸಿಡಲು ಕವಾಟು ನಿರ್ಮಿಸಿ ಕೊಟ್ಟಿತ್ತು. 2015ರಲ್ಲಿ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್ 15 ಲಕ್ಷ ರೂ. ವೆಚ್ಚದಲ್ಲಿ ಸುಂದರವಾದ ಹೊಸ ಮನೆ ನಿರ್ಮಿಸಿ ಅದರಲ್ಲಿ ಪ್ರಶಸ್ತಿ ಫಲಕಗಳನ್ನಿಡಲು ಪ್ರತ್ಯೇಕ ಸ್ಥಳಾವಕಾಶ ಮಾಡಿಕೊಟ್ಟಿತ್ತು. ಆದರೆ ದಿನದಿಂದ ದಿನಕ್ಕೆ ಪ್ರಶಸ್ತಿ-ಲಕಗಳ ಸಂಖ್ಯೆ ಹೆಚ್ಚುತ್ತಿವೆ. ಅವುಗಳನ್ನು ಜೋಡಿಸಿಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ‘ಏಜ್ ಮಂಗಳೂರು’ ಸಂಸ್ಥೆಯು ಮ್ಯೂಸಿಯಂ ಮಾದರಿಯ ಶೋಕೇಸ್ ನಿರ್ಮಿಸಿಕೊಡಲು ವಾಗ್ದಾನ ನೀಡಿದ್ದು, ಮನೆಯೊಳಗೆ ಸುಂದರವಾದ ಶೋಕೇಸ್ ಮಾಡಿದರೆ ಮಕ್ಕಳ ಮದುವೆ ಮತ್ತಿತರ ಕಾರ್ಯಕ್ರಮದ ಸಂದರ್ಭ ಸಮಸ್ಯೆಯಾಗಬಹುದು ಎಂದು ಅರಿತ ಹಾಜಬ್ಬ ಸ್ವತಃ 1.30 ಲಕ್ಷ ರೂ. ವ್ಯಯಿಸಿ ಹೊಸ ಕಟ್ಟಡ ನಿರ್ಮಿಸಿ ಶೋಕೇಸ್ ಅಳವಡಿಕೆಗಾಗಿ ಕಾಯುತ್ತಿದ್ದಾರೆ.

ಹಾಜಬ್ಬರಿಗೆ ಲಭಿಸಿದ ಪ್ರಶಸ್ತಿಗಳು

ಹಾಜಬ್ಬರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಿಎನ್‌ಎನ್, ಐಬಿಎನ್‌ನ ರಿಯಲ್ ಹೀರೊ, ಚಿತ್ರದುರ್ಗದ ಮುರುಘ ಮಠದ ಪ್ರಶಸ್ತಿ, ಕೊಪ್ಪಳ ಗವಿಸಿದ್ಧೇಶ್ವರ ಮಠದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೀಡಿದ್ದ ಪ್ರಶಸ್ತಿ, ಕನ್ನಡ ಪ್ರಭ ಪತ್ರಿಕೆಯ ವರ್ಷದ ವ್ಯಕ್ತಿ ಪ್ರಶಸ್ತಿ, ಮೈಸೂರು ರಮಾಬಾಯಿ ಚಾರಿಟೇಬಲ್ ಫೌಂಡೇಶನ್‌ನ ದೊಡ್ಡ ಮೊತ್ತದ ಪ್ರಶಸ್ತಿ, ಬ್ಯಾರಿ ಅಕಾಡಮಿಯ ಪ್ರಶಸ್ತಿ, ತುಳುನಾಡ ತುಡರ್, ಶೇಖ್ ಅಹ್ಮದ್ ಸರ್ ಹಿಂದಿ, ಅಬುಧಾಬಿಯ ಬಿಡಬ್ಲ್ಯುಎಫ್ ದಶಮಾನೋತ್ಸವದ ಪ್ರಶಸ್ತಿ, ಬಹರೈನ್ ಕನ್ನಡ ಸಂಘದ ವಸಂತೋತ್ಸವ, ಆಳ್ವಾಸ್, ಮೂಲತ್ವ ಪ್ರಶಸ್ತಿ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ಬ್ಯಾರೀಸ್ ವೆಲೆಫೇರ್ ಅಸೋಸಿಯೇಶನ್, ಡಾ.ಪುಟ್ಟರಾಜ ಗವಾಯಿ ಗುರುವಂದನಾ ಪ್ರಶಸ್ತಿ, ಯೆನೆಪೊಯ ಎಕ್ಸಲೆಂಟ್ ಅವಾರ್ಡ್, ಪ್ರತಿಷ್ಠಿತ ಪದ್ಮಶ್ರೀ ಹೀಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

ಮಂಗಳೂರಿನ ಏಜ್ ಸಂಸ್ಥೆಯವರು ಈ ಪ್ರಶಸ್ತಿ-ಫಲಕಗಳನ್ನು ಜೋಡಿಸಿಡಲು ಶೋಕೇಸ್ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಅದು ಏನೋ ಬಾಕಿಯಾಗಿದೆ. ಇಂದಲ್ಲ, ನಾಳೆ ಖಂಡಿತಾ ಅವರು ಶೋಕೇಸ್ ಮಾಡಿ ಕೊಡುವ ವಿಶ್ವಾಸವಿದೆ.

- ಹರೇಕಳ ಹಾಜಬ್ಬ, ಪದ್ಮಶ್ರೀ ಪುರಸ್ಕೃತರು

ಹರೇಕಳ ಹಾಜಬ್ಬರಿಗೆ ಖಂಡಿತಾ ಶೋಕೇಸ್ ನಿರ್ಮಿಸಿ ಕೊಡುತ್ತೇವೆ ಎಂದು ನಾವು ಭರವಸೆ ನೀಡಿದ್ದೆವು. ಈ ಮಧ್ಯೆ ನಮ್ಮ ಅಧ್ಯಕ್ಷರು ಫೆಬ್ರವರಿ ಯಲ್ಲಿ ವಿದೇಶದಲ್ಲಿರುವ ಮಗನ ಮನೆಗೆ ತೆರಳಿದ್ದು, ಎಪ್ರಿಲ್‌ನಲ್ಲಿ ಮರಳಿ ಬರುವವರಿದ್ದರು. ಆದರೆ ಕೊರೋನದಿಂದ ವಿಳಂಬವಾಗಿದೆ. ಅಧ್ಯಕ್ಷರು ಊರಿಗೆ ಬಂದೊಡನೆ ಅವರ ಸಮ್ಮುಖ ಹೊ ಶೋಕೇಸ್ ಹಸ್ತಾಂತರಿಸಲಿದ್ದೇವೆ.
- ಎಂ.ಎಸ್.ಕಾಮತ್,
ಕಾರ್ಯದರ್ಶಿ, ಏಜ್-ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News