ವೆನೆಝುವೆಲ: ಅವೆುರಿಕನ್ ‘ಗೂಢಚಾರ’ನ ವಿರುದ್ಧ ‘ಉಗ್ರ’ ಆರೋಪ

Update: 2020-09-15 18:03 GMT

ಕ್ಯಾರಕಸ್ (ವೆನೆಝುವೆಲ), ಸೆ. 15: ವೆನೆಝುವೆಲದ ತೈಲ ಸಂಸ್ಥಾಪನೆಯೊಂದರ ಸಮೀಪ ಕಳೆದ ವಾರ ಬಂಧಿಸಲಾದ ‘ಅಮೆರಿಕದ ಗೂಢಚಾರ’ನ ಮೇಲೆ ಭಯೋತ್ಪಾದನೆ ಆರೋಪವನ್ನು ಹೊರಿಸಲಾಗುವುದು ಎಂದು ವೆನೆಝುವೆಲದ ಅಟಾರ್ನಿ ಜನರಲ್ ತಾರಿಕ್ ವಿಲಿಯಮ್ ಸಾಬ್ ಸೋಮವಾರ ಪ್ರಕಟಿಸಿದ್ದಾರೆ.

ಈ ‘ಗೂಢಚಾರ’ನ ಬಂಧನವನ್ನು ವೆನೆಝುವೆಲ್ ಶುಕ್ರವಾರ ಘೋಷಿಸಿದೆ. ಆ ವ್ಯಕ್ತಿಯು ಎರಡು ತೈಲ ಶುದ್ಧೀಕರಣ ಘಟಕಗಳ ಸಮೀಪ ಗೂಢಚಾರಿಕೆ ನಡೆಸುತ್ತಿದ್ದನು ಹಾಗೂ ಆತನಿಂದ ಹಣ ಮತ್ತು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅದು ಹೇಳಿತ್ತು.

ಬಳಿಕ, ಇದೇ ಘಟನೆಗೆ ಸಂಬಂಧಿಸಿ ವಾರಾಂತ್ಯದಲ್ಲಿ ನಡೆದ ಬಂಧನ ಕಾರ್ಯಾಚರಣೆಯಲ್ಲಿ ಏಳು ವೆನೆಝವೆಲ ನಾಗರಿಕರನ್ನು ಬಂಧಿಸಲಾಗಿತ್ತು.

‘‘ವೆನೆಝುವೆಲದ ಎಲ್ಲ ಬಂಧಿತ ನಾಗರಿಕರ ವಿರುದ್ಧ ದೇಶದ್ರೋಹ, ಭಯೋತ್ಪಾದನೆ, ಅಕ್ರಮ ಆಯುಧ ಸಾಗಣೆ ಮತ್ತು ಅಪರಾಧ ನಡೆಸುವುದಕ್ಕಾಗಿ ಅಮೆರಿಕದ ನಾಗರಿಕನೊಂದಿಗೆ ಅಕ್ರಮ ಸಂಪರ್ಕ ಇಟ್ಟುಕೊಂಡಿರುವ ಆರೋಪವನ್ನು ಹೊರಿಸಲಾಗುತ್ತದೆ’’ ಎಂದು ಸಾಬ್ ಹೇಳಿದರು.

‘‘ಅವೆುರಿಕದ ನಾಗರಿಕನ ವಿರುದ್ಧ ಭಯೋತ್ಪಾದನೆ ಮತ್ತು ಅಕ್ರಮ ಆಯುಧ ಸಾಗಣೆ ಆರೋಪವನ್ನು ಹೊರಿಸಲಾಗಿದೆ’’ ಎಂದು ಸರಕಾರಿ ಟೆಲಿವಿಶನ್‌ಗೆ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News