ರಾಜಸ್ಥಾನ: ದೋಣಿ ಮಗುಚಿ ಬಿದ್ದು 14 ಮಂದಿ ಮೃತ್ಯು

Update: 2020-09-16 09:48 GMT

 ಜೈಪುರ, ಸೆ.16: ರಾಜಸ್ಥಾನದ ಬಂಡಿ ಜಿಲ್ಲೆಯ ಚಂಬಲ್ ನದಿಯಲ್ಲಿ ಇಂದು ಬೆಳಗ್ಗೆ 40 ಮಂದಿ ಭಕ್ತರಿದ್ದ ದೋಣಿ ಮಗುಚಿ ಬಿದ್ದ ಪರಿಣಾಮ 14 ಜನರು ಮುಳುಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಭಕ್ತರು ಇಂದರ್‌ಘರ್ ಪ್ರದೇಶದ ದೇವಸ್ಥಾನಕ್ಕೆ ತೆರಳುತ್ತಿದ್ದರು.

 ದೋಣಿಯು 40 ಜನರನ್ನು ಹೊತ್ತುಕೊಂಡು ಬಂಡಿ ಜಿಲ್ಲೆಯ ಇಂದರ್‌ಘರ್ ಪ್ರದೇಶಕ್ಕೆ ತೆರಳುತ್ತಿತ್ತು. ಬುಧವಾರ ಬೆಳಗ್ಗೆ 8:45ಕ್ಕೆ ಅವಘಡ ಸಂಭವಿಸಿದೆ. ಸುಮಾರು 20ರಿಂದ 25 ಮಂದಿ ಈಜಾಡಿ ದಡ ಸೇರಿದ್ದಾರೆ ಎಂದು ಕೋಟಾದ ಗ್ರಾಮೀಣ ಪೊಲೀಸ್ ಅಧೀಕ್ಷಕ ಶರದ್ ಚೌಧರಿ ಹೇಳಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣೆ ಪಡೆಗಳು ಘಟನಾ ಸ್ಥಳಕ್ಕೆ ತಲುಪುವ ಮೊದಲೇ ಸ್ಥಳೀಯ ಗ್ರಾಮಸ್ಥರು ದೋಣಿಯಲ್ಲಿದ್ದ ಜನರನ್ನು ರಕ್ಷಿಸಲು ನದಿಗೆ ಧುಮುಕಿದ್ದರು.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ.

ಕೋಟಾದ ಚಂಬಲ್ ಬಳಿ ದೋಣಿ ಉರುಳಿ ಬಿದ್ದ ಘಟನೆ ದುರದೃಷ್ಟಕರ. ಅಪಘಾತಕ್ಕೀಡಾದವರ ಕುಟುಂಬಗಳಿಗೆ ನನ್ನ ಸಂತಾಪ’’ ಎಂದು ಟ್ವೀಟ್ ಮಾಡಿದ್ದಾರೆ.

 ಕೋಟಾದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಗೆಹ್ಲೊಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News