ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳುವಾಗ ಇರಲಿ ಎಚ್ಚರ : ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್ ಅಧಿಕಾರಿ ಶುಭಂ ಸಿಂಗ್

Update: 2020-09-16 15:47 GMT
ಶುಭಂ ಸಿಂಗ್

ಮಂಗಳೂರು, ಸೆ.16: ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವವರು ವಲಸಿಗರ ರಕ್ಷಕ (ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್- ಪಿಒಇ) ಕಚೇರಿಯಿಂದ ನೋಂದಣಿ ಪ್ರಮಾಣ ಪತ್ರವನ್ನು ಪಡೆದ ಅಧಿಕೃತ ಏಜೆಂಟ್ ಸಂಸ್ಥೆಗಳ ಮೂಲಕವೇ ವ್ಯವಹರಿಸಬೇಕು ಎಂದು ಐಎಫ್‌ಎಸ್ ಅಧಿಕಾರಿ ಹಾಗೂ ಕರ್ನಾಟಕ, ಗೋವಾದ ವಲಸಿಗರ ರಕ್ಷಕ (ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್) ಕಚೇರಿಯ ಮುಖ್ಯಸ್ಥರಾದ ಶುಭಂ ಸಿಂಗ್ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಮಂಗಳೂರಿನಲ್ಲಿ ಅಧಿಕೃತ ಏಜೆನ್ಸಿಗಳ ವ್ಯವಹಾರಗಳ ಪರಿಶೀಲನೆ ಹಾಗೂ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಏಜೆನ್ಸಿಗಳ ಕುರಿತಂತೆ ಬಂದಿರುವ ದೂರುಗಳ ಕುರಿತಂತೆ ಮಾಹಿತಿ ಪಡೆಯುವ ಸಲುವಾಗಿ ಮಂಗಳೂರಿಗೆ ಆಗಮಿಸಿದ್ದ ಅವರು ‘ವಾರ್ತಾಭಾರತಿ’ ಜತೆ ಅಭಿಪ್ರಾಯ ಹಂಚಿಕೊಂಡರು.

ಸಾಗರೋತ್ತರ ರಾಷ್ಟ್ರಗಳಿಗೆ ಉದ್ಯೋಗಿಗಳನ್ನು ರವಾನಿಸುವ ವ್ಯವಹಾರ ನಡೆಸುವ ಸಂಸ್ಥೆಗಳು ಭಾರತದ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಡಿ ಕಾರ್ಯಾಚರಿಸುತ್ತಿರುವ ವಲಸಿಗರ ರಕ್ಷಕ (ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್- ಪಿಒಇ) ಕಚೇರಿಯಿಂದ ನೋಂದಣಿ ಪ್ರಮಾಣ ಪತ್ರವನ್ನು ಪಡೆಯಬೇಕಾಗುತ್ತದೆ. ರಾಜ್ಯದಲ್ಲಿ ಪ್ರಸ್ತುತ 20 ಸಂಸ್ಥೆಗಳು ಅಧಿಕೃತವಾಗಿ ನೋಂದಾಯಿಸಿಕೊಂಡಿವೆ. ಮಂಗಳೂರು ಸೇರಿದಂತೆ ರಾಜ್ಯದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಸಂಸ್ಥೆಗಳ ವಿರುದ್ಧ ಕಾರ್ಯಾಚರಣೆಗೆ ಪಿಒಇ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಶುಭಂ ಸಿಂಗ್ ಹೇಳಿದರು.

2019ರ ಡಿಸೆಂಬರ್ 3ರಿಂದ ಬೆಂಗಳೂರಿನ ಕೋರಮಂಗಲದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಲ್ಲಿ ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್ ಕಚೇರಿ ಕಾರ್ಯಾರಂಭಿಸಿದ ಬಳಿಕ ಸಾಕಷ್ಟು ಬದಲಾವಣೆಗಳಾಗಿವೆ. ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳುವವರು ಕಚೇರಿಯ ವೆಬ್‌ಸೈಟ್ ಅಥವಾ ದೂರವಾಣಿ ಮೂಲಕ ನಮ್ಮನ್ನು ಸಂಪರ್ಕಿಸಿ ತಾವು ವ್ಯವಹರಿಸುತ್ತಿರುವ ಏಜೆಂಟ್ ಸಂಸ್ಥೆಗಳ ಅಧಿಕೃತತೆಯನ್ನು ದೃಢಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ವಲಸೆ ಕಾಯ್ದೆ 1983ರಂತೆ, ಕರ್ನಾಟಕದಿಂದ ವಿದೇಶಕ್ಕೆ ಉದ್ಯೋಗಕ್ಕೆ ತೆರಳಲು ಬಯಸುವುದಾದರೆ ಅವರ ಹಕ್ಕುಗಳು ಉಲ್ಲಂಘನೆಯಾಗದಂತೆ ಕಾಪಾಡುವುದು ಹಾಗೂ ವಿದೇಶಕ್ಕೆ ಉದ್ಯೋಗಿಗಳನ್ನು ಕಳುಹಿಸಲು ಮುಂದಾಗುವ ಸಂಸ್ಥೆಗಳಿಗೆ ಪರವಾನಿಗೆಯನ್ನು ನೀಡುವುದು ನಮ್ಮ ಪ್ರಮುಖ ಕರ್ತವ್ಯವಾಗಿರುತ್ತದೆ. ಇದೇ ವೇಳೆ, ರಾಜ್ಯದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ನೇಮಕಾತಿ ಏಜೆಂಟ್ ಸಂಸ್ಥೆಗಳ ವಿರುದ್ಧ ಕಾರ್ಯಾಚರಣೆಯನ್ನೂ ನಾವು ಮಾಡುತ್ತಿದ್ದು, ಈ ಸಂದರ್ಭ ಪೊಲೀಸರು ಹಾಗೂ ಸ್ಥಳೀಯಾಡಳಿತದ ನೆರವನ್ನು ಪಡೆಯಲಾಗುತ್ತದೆ. ಇದೇ ವೇಳೆ ವಿದೇಶಗಳಿಗೆ ಉದ್ಯೋಗಕ್ಕೆ ತೆರಳುವವರು ಅಲ್ಲಿ ಯಾವುದೇ ರೀತಿಯಲ್ಲಿ ಮೋಸ, ಅನ್ಯಾಯಕ್ಕೆ ಒಳಗಾಗದಂತೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಕಾರ್ಯವನ್ನೂ ನಡೆಸುತ್ತೇವೆ. ಯಾವುದೇ ಏಜೆಂಟ್‌ನಿಂದ ವಿದೇಶಕ್ಕೆ ತೆರಳಿರುವ ಕಾರ್ಮಿಕರಿಗೆ, ಉದ್ಯೋಗಿಗಳಿಗೆ ತೊಂದರೆಯಾದಲ್ಲಿ ನಾವು ಭಾರತೀಯ ರಾಯಭಾರಿ ಕಚೇರಿಯ ಮೂಲಕ ಅವರಿಗೆ ನೆರವಾಗುವಲ್ಲಿ ಸಹಕರಿಸುತ್ತೇವೆ. ಈ ಸಂದರ್ಭ ತಪ್ಪಿತಸ್ಥ ಏಜೆಂಟ್ ಅಥವಾ ಏಜೆಂಟ್ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ, ಅನ್ಯಾಯಕ್ಕೊಳಗಾಗಿದ್ದವರಿಗೆ ಪರಿಹಾರ ಕ್ರಮವನ್ನೂ ನಾವು ಕೈಗೊಳ್ಳುತ್ತೇವೆ ಎಂದು ಶುಭಂ ಸಿಂಗ್ ವಿವರಿಸಿದರು.

ಭಾರತ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಡಿ ಕಾರ್ಯಾಚರಿಸುತ್ತಿರುವ ಬೆಂಗಳೂರಿನ ಕಚೇರಿಯು ಕರ್ನಾಟಕ ಹಾಗೂ ಗೋವಾ ವ್ಯಾಪ್ತಿಯನ್ನು ಹೊಂದಿದ್ದು, ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸುತ್ತಿದೆ. ಪ್ರಸ್ತುತ ಕರ್ನಾಟಕದಲ್ಲಿ ಒಟ್ಟು 20 ಅಧಿಕೃತ ನೇಮಕಾತಿ ಏಜೆಂಟ್ ಸಂಸ್ಥೆಗಳಿವೆ. ಅವುಗಳಲ್ಲಿ ಏಳು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿವೆ. ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿರುವ  51 ವಿದೇಶಿ ನೇಮಕಾತಿ ಏಜೆಂಟ್ ಪಟ್ಟಿಯನ್ನು ಈಗಾಗಲೇ ಪೊಲೀಸ್ ಇಲಾಖೆಗೆ ಪರಿಶೀಲನೆ ನೀಡಲಾಗಿದೆ. ಉಳಿದಂತೆ ಅನಧಿಕೃತವಾಗಿ ರಾಜ್ಯದಲ್ಲಿ 280 ಏಜೆಂಟ್‌ಗಳು ಕಾರ್ಯಾಚರಿಸುತ್ತಿರುವ ಮಾಹಿತಿಯನ್ನು ಪಡೆದಿದ್ದು, ಪಿಒಇ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಈ ಬಾರಿ ನನ್ನ ಮಂಗಳೂರಿನ ಭೇಟಿಯ ವೇಳೆ ನೋಂದಣಿಯಾಗದ 30 ಏಜೆಂಟ್‌ಗಳನ್ನು ಭೇಟಿಯಾಗಿದ್ದೇನೆ. ಅವರಿಗೆ ವಲಸೆ ಕಾಯ್ದೆಯನ್ನು ಉಲ್ಲಂಘಿಸದಿರಲು ಎಚ್ಚರಿಕೆ ನೀಡಲಾಗಿದೆ. ಮುಖ್ಯವಾಹಿನಿಗೆ ಬಂದು ನೋಂದಣಿ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಕೆಲವರಿಗೆ ಯಾವ ರೀತಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕೆಂಬ ಅರಿವೇ ಇಲ್ಲವಾಗಿತ್ತು. ಹಾಗಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಮೂರು ಮಂದಿ ನಿನ್ನೆಯಿಂದಲೇ ನೋಂದಣಿ, ರವಾನಿಗೆಗೆ ಪ್ರಕ್ರಿಯೆ ಆರಂಭಿಸಿದ್ದಾರೆ. ಕೊರೋನದಿಂದಾಗಿ ವಿದೇಶಗಳಲ್ಲಿ ದುಡಿಯುತ್ತಿದ್ದ ಸಾವಿರಾರು ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ವಾಪಾಸಾಗಿದ್ದಾರೆ. ಇದು ತಾತ್ಕಾಲಿಕ ಪರಿಸ್ಥಿತಿ. ಕೊರೋನದ ಬಳಿಕ ಉದ್ಯಮಗಳು ಮತ್ತೆ ತೆರೆದುಕೊಂಡು ಉದ್ಯೋಗಗಳು ದೊರಕಲಿವೆ. ಕಳೆದ ಕೆಲ ವಾರಗಳಿಂದೀಚೆಗೆ ಕೆಲ ರಾಷ್ಟ್ರಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಚಾಲಕರು, ಮೆಕ್ಯಾನಿಕ್ಸ್, ಟೆಕ್ನೀಶಿಯನ್‌ಗಳು ಸೇರಿದಂತೆ ಹಲವು ಕ್ಷೇತ್ರದ ಉದ್ಯೋಗಿಗಳಿಗೆ ಸ್ಕೈಪ್ ಸಂದರ್ಶನಗಳು ಆರಂಭಗೊಂಡಿವೆ. ಹಾಗಾಗಿ ವಿದೇಶಗಳಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವವರು, ಹೋಗ ಬಯಸುವವರು ಅಧಿಕೃತ ನೇಮಕಾತಿ ಏಜೆಂಟರ ಮೂಲಕವೇ ವ್ಯವಹಾರ ನಡೆಸಬೇಕು. ಕರ್ನಾಟಕದಲ್ಲಿ ಸದ್ಯ 20 ಏಜೆಂಟ್ ಸಂಸ್ಥೆಗಳು ಅಧಿಕೃತವಾಗಿ ನೋಂದಾಯಿಸಿಕೊಂಡಿವೆ ಎಂದು ಶುಭಂ ಸಿಂಗ್ ಸ್ಪಷ್ಟಪಡಿಸಿದರು.

''ವಿದೇಶಕ್ಕೆ ಉದ್ಯೋಗಕ್ಕೆ ತೆರಳುವ ವಲಸೆ ಪರಿಶೀಲನೆ ಅಗತ್ಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವವರು (Emigration Check Required) ಕ್ಲಿಯೆರೆನ್ಸ್‌ಗಾಗಿ ಪಿಇಒ ಕಚೇರಿಯಡಿ ನೋಂದಣಿಯಾದ ಏಜೆಂಟರು ಅಥವಾ ಏಜೆಂಟ್ ಸಂಸ್ಥೆಗಳಿಗಾಗಿ Emigrate.gov.in ವೆಬ್‌ಸೈಟ್ ಪರಿಶೀಲಿಸಬಹುದು ಅಥವಾ ತಮ್ಮನ್ನು ಇಮೇಲ್ ಅಥವಾ ದೂ.ಸಂ.: 8025711499/599 ಮೂಲಕವೂ ಸಂಪರ್ಕಿಸಬಹುದು.

ನಮಗೆ ದೂರು ಅಥವಾ ಯಾವುದೇ ಏಜೆಂಟ್ಸ್ ಗಳ ಮಾಹಿತಿಗಾಗಿ ಸಂಪರ್ಕಿಸಿದ ಒಂದು ಗಂಟೆಯೊಳಗೆ ಮಾಹಿತಿಯನ್ನು ಒದಗಿಸಲಿದ್ದೇವೆ. ದೂರುಗಳಿಗೆ ಸ್ಪಂದಿಸುತ್ತೇವೆಂಬ ಖಾತರಿಯನ್ನು ನಾನು ನೀಡುತ್ತೇನೆ. ಪಿಒಇ ಕಚೇರಿಯಲ್ಲಿ ನೋಂದಣಿಯಾಗಲು ಬಯಸುವ ನಿರೀಕ್ಷಿತ ಏಜೆಂಟರು ಕೂಡಾ ತಮ್ಮ ನೋಂದಣಿಗೆ ಸಂಬಂಧಿಸಿ ವೆಬ್‌ಸೈಟ್‌ನಲ್ಲಿ ತಿಳಿಸಲಾದ ದಾಖಲೆಗಳನ್ನು ಒದಗಿಸಿ ನೋಂದಣಿ ಪರವಾನಿಗೆಯನ್ನು ಪಡೆಯಬಹುದು.

ಏಜೆನ್ಸ್ಸಿಗಳು ವಿದೇಶಗಳಲ್ಲಿ ಉದ್ಯೋಗಕ್ಕೆ ಸಂಬಂಧಿಸಿ ಪತ್ರಿಕೆಯಲ್ಲಿ ಜಾಹೀರಾತು ನೀಡುವಾಗ ಆ ಸಂಸ್ಥೆಗಳು ಪಿಒಇ ಪರಾವನಿಗೆಯನ್ನು ಪಡೆದು ಕೊಂಡಿದ್ದಾರೆ ಎಂದು ಖಾತರಿಪಡಿಸಬೇಕು. ಸಂಸ್ಥೆಯ ಪರಾವನಿಗೆ ಸಂಖ್ಯೆ ಅಧಿಕೃತವೇ ಎಂಬುದನ್ನು ಪಿಒಇಯ ಇ-ಮೇಲ್ ಅಥವಾ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಇಮೇಲ್ ಮಾಡಿದ 1 ಗಂಟೆಯ ಒಳಗೆ ಪೂರಕ ಸ್ಪಂದನೆಯನ್ನು ನಮ್ಮ ಇಲಾಖೆಯಿಂದ ನೀಡಲಾಗುವುದು. ಸಾರ್ವಜನಿಕರು ಕೂಡಾ ಜಾಹೀರಾತುಗಳನ್ನು ನೋಡಿ ವಿದೇಶಗಳಲ್ಲಿ ಉದ್ಯೋಗ ಬಯಸಿ ಜಾಹೀರಾತು ನೀಡಿದ ಸಂಸ್ಥೆಯ ಜೊತೆ ವ್ಯವಹಾರಿಸುದಾದಲ್ಲಿ ಆ ಏಜೆನ್ಸಿ ಅಧಿಕೃತ ಪರಾವನಿಗೆದಾರರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು''. 
- ಶುಭಂ ಸಿಂಗ್, ವಲಸಿಗರ ರಕ್ಷಕ (ಐಎಫ್‌ಎಸ್ ‌ಅಧಿಕಾರಿ), ಬೆಂಗಳೂರು.

ಕರ್ನಾಟಕದ ನೋಂದಾಯಿತ ಏಜೆನ್ಸಿಗಳು

ದಿ ಅಮ್ ಗ್ರೂಪ್ (ಬೆಂಗಳೂರು), ಜಾಬ್‌ಕ್ರಾಫ್ಟ್ (ಬೆಂಗಳೂರು), ರಹ್ಮಾನ್ ಎಂಟರ್‌ಪ್ರೈಸಸ್ (ಬೆಂಗಳೂರು), ಸೀಮಾ ಎಂಟರ್‌ಪ್ರೈಸಸ್ (ಬೆಂಗಳೂರು), ಯುತಲಿಯ ಎಚ್‌ಆರ್ ಸೊಲ್ಯೂಶನ್ಸ್ ಪ್ರೈ.ಲಿ. (ಬೆಂಗಳೂರು), ದುರು ಕಾರ್ಪೊರೇಶನಂ ಪ್ರೈವೇಟ್ (ಬೆಂಗಳೂರು), ಕೆಎಸ್‌ಯುಡಬ್ಲುಎಸ್‌ಎಸ್‌ಬಿ (ಬೆಂಗಳೂರು), ಕೆವಿಟಿಎಸ್‌ಡಿಸಿ (ಬೆಂಗಳೂರು), ಇಂಟರ್‌ನ್ಯಾಷನಲ್ ಔಟ್‌ಸೋರ್ಸಿಂಗ್ ಕನ್ಸಲ್ಟಿಂಗ್ ಸರ್ವಿಸಸ್ (ಬೆಂಗಳೂರು), ಮೆಸರ್ಸ್ ಡಿಕೆಎನ್ ಎಡ್ವೈಸರಿ (ಬೆಂಗಳೂರು), ಎಚ್‌ಆರ್ ಕನ್ಸಲ್ಟನ್ಸಿ (ಬೆಂಗಳೂರು), ಕೆರಿಯರ್ಸ್ ಇಂಟರ್‌ನ್ಯಾಷನಲ್ಸ್ (ಮಂಗಳೂರು), ಮೆಸರ್ಸ್ ರಾಯಲ್ ಸೋರ್ಸ್ ಮ್ಯಾನ್‌ಪವರ್ ಸೊಲ್ಯೂಶನ್ಸ್ ಎಲ್‌ಎಲ್‌ಪಿ (ಮೂಡಬಿದ್ರೆ), ಎವರ್‌ಸರ್ವ್ ಕನ್ಸಲ್ಟಂಟ್ಸ್ ಪ್ರೈವೇಟ್ (ಮಂಗಳೂರು), ರಾಯ್‌ವಿನ್ ರಿಕ್ರೂಟರ್ಸ್ (ಬಂಟ್ವಾಳ), ಸುಹಾನ ಟ್ರಾವೆಲ್ಸ್ (ಮಂಗಳೂರು), ಜೆಮಿನಿ ಎಂಟರ್‌ಪ್ರೈಸರ್ಸ್ (ಮಂಗಳೂರು), ಆ್ಯಸ್ ‌ಮ್ಯಾಕ್ಸ್ ಕನ್ಸಲ್ಟೆಂಟ್ಸ್ (ಮಂಗಳೂರು), ಅಲ್ ವಹಿದ್ ರಿಕ್ರೂಟರ್ (ಧಾರವಾಡ), ಬರಾಕ್ ಕನ್ಸಲ್ಟೆನ್ಸಿ (ಹುಬ್ಬಳ್ಳಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News