ಬೆಳ್ತಂಗಡಿ : ಮುಸ್ಲಿಂ ಸಂಘಟನೆಗಳ ಒಕ್ಕೂಟ ವತಿಯಿಂದ ತಹಶೀಲ್ದಾರರಿಗೆ ಮನವಿ

Update: 2020-09-16 13:37 GMT

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನಲ್ಲಿ ಎರಡು ವಾರಗಳ ಅಂತರದಲ್ಲಿ ಮುಸ್ಲಿಂ ಸಮಾಜವನ್ನು ಗುರಿಯಾಗಿಸಿ ದೌರ್ಜನ್ಯ ನಡೆಯುತ್ತಿದ್ದು, ಈ‌ ಬಗ್ಗೆ ನ್ಯಾಯ ಕೊಡಬೇಕು‌ ಎಂದು ತಾಲೂಕು ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಶೀಲ್ದಾರರಿಗೆ ಮನವಿ ನೀಡಲಾಯಿತು.

ಇದರ ಜೊತೆಗೆ ಕಳೆದ ವರ್ಷ ರವೂಫ್ ಮುಸ್ಲಿಯಾರ್ ಗೋವಿಂದೂರು ಎಂಬವರ ಮೇಲೆ ಪಾಕಿಸ್ತಾನಕ್ಕೆ ಸೆಟಲೈಟ್ ಕಾಲ್ ಎಂಬ ಗಂಭೀರ ಆರೋಪ ಮಾಡಲಾಗಿದ್ದು, ಇನ್ನೂ ಈ ಘಟನೆ ದೃಢಪಟ್ಟಿಲ್ಲ. ಈ ಬಗ್ಗೆ ತನಿಖೆ ನಡೆಸಿ ಇಂತಹಾ ಗಂಭೀರ ವದಂತಿ ಸೃಷ್ಟಿ ಮಾಡಿದ ಮೂಲ ವ್ಯಕ್ತಿ ಯಾರೆಂದು ಶೋಧಿಸಿ ಆ ಶಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ನಿಯೋಗ ಮನವಿ ‌ಮೂಲಕ ಒತ್ತಾಯಿಸಿದರು.

ರವೂಫ್ ಮುಸ್ಲಿಯಾರ್ ಅವರ ವಿರುದ್ಧ ರಾಷ್ಟ್ರ ದ್ರೋಹದ ಗಂಭೀರ ಆಪಾದನೆಯನ್ನು ಕೆಲ ಶಕ್ತಿಗಳು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಅವರ ಭಾವ ಚಿತ್ರ ಸಹಿತ ವರದಿಗಳು ಪ್ರಕಟಗೊಂಡು ಅವರನ್ನು ತೇಜೋವಧೆ ಮಾಡಲಾಗಿತ್ತು. ಇದೀಗ ಘಟನೆ ನಡೆದು ವರ್ಷ ಒಂದು ದಾಟಿದರೂ ಈ ‌ಬಗ್ಗೆ ಯಾವುದೇ ತನಿಖೆ ನಡೆದಿಲ್ಲ. ಇಂತಹಾ ಗಂಭೀರ ಆರೋಪವನ್ನು ಎಸಗುವ ಮುನ್ನ ಆಧಾರವಿಲ್ಲದೆ ಆಪಾದನೆ ಮಾಡಿದವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲು ನಿಯೋಗ ಆಗ್ರಹಿದೆ.

ಈ‌ ಸಂದರ್ಭ ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ. ನಝೀರ್, ಮುಸ್ಲಿಂ ಜಮಾಅತ್ ಅಧ್ಯಕ್ಷ ಎಸ್.ಎಂ ಕೋಯ, ಕಾರ್ಯದರ್ಶಿ ಮುಹಮ್ಮದ್ ರಫಿ, ಎಸ್.ಎಮ್.ಎ ರಾಜ್ಯ ಉಪಾಧ್ಯಕ್ಷ ಎ.ಕೆ. ಅಹಮದ್, ಕಾರ್ಯದರ್ಶಿ ಸಾದಿಕ್ ಮಲೆಬೆಟ್ಟು, ಪಿ.ಎಫ್.ಐ‌ ಮುಖಂಡ ಹೈದರ್ ನೀರ್ಸಾಲ್, ಸಾಮಾಜಿಕ ಕಾರ್ಯಕರ್ತರಾದ ಅಕ್ಬರ್ ಬೆಳ್ತಂಗಡಿ, ಅಬ್ದುಲ್ ಕರೀಂ ಗೇರುಕಟ್ಟೆ, ಮುಸ್ಲಿಂ ಐಖ್ಯತಾ ವೇದಿಕೆ ಅಧ್ಯಕ್ಷ ಸಲೀಂ ಗುರುವಾಯನಕೆರೆ, ಎಸ್.ಕೆ.ಎಸ್ಸೆಸ್ಸೆಫ್ ವಲಯ ಉಪಾಧ್ಯಕ್ಷ ಅಬ್ದುಲ್ ರಝಾಕ್ ಕನ್ನಡಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News