ಉಡುಪಿ ನಗರದ ಅಂಗಡಿಯಲ್ಲಿ ಬೆಂಕಿ ಅಕಸ್ಮಿಕ: ಲಕ್ಷಾಂತರ ರೂ. ನಷ್ಟ
ಉಡುಪಿ, ಸೆ.16: ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಐಡಿಎಸ್‌ಎಂಟಿ ಕಟ್ಟಡದಲ್ಲಿ ಸೆ.16ರಂದು ನಸುಕಿನ ವೇಳೆ 2:30ರ ಸುಮಾರಿಗೆ ಸಂಭವಿಸಿದ ಬೆಂಕಿ ಅಕಸ್ಮಿಕದಿಂದ ಎರಡು ಅಂಗಡಿಗಳಲ್ಲಿನ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಸುಟ್ಟು ಹೋಗಿರುವ ಬಗ್ಗೆ ವರದಿಯಾಗಿದೆ.
ರಘುನಾಥ್ ರಾವ್ ಎಂಬವರಿಗೆ ಸೇರಿದ ಅಂಗಡಿ ಕೋಣೆಯನ್ನು ವಿಭಜಿಸಿ, ಮಲ್ಲಿಕಾರ್ಜುನ ಸ್ಟೋರ್ ಮತ್ತು ಮೊಬೈಲ್ ಕೇರ್ ಶಾಪ್‌ನ್ನು ನಡೆಸಲಾಗು ತ್ತಿತ್ತು. ರಾತ್ರಿ ಕಟ್ಟಡದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದ ಈ ಎರಡು ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಗಳು ಒಂದು ಗಂಟೆಗಳ ನಿರಂತರ ಕಾರ್ಯಾಚರಣೆಯ ಮೂಲಕ ಬೆಂಕಿ ನಂದಿ ಸಿದರು. ಮಲ್ಲಿಕಾರ್ಜುನ ಸ್ಟೋರ್‌ನಲ್ಲಿದ್ದ ತಿಂಡಿ ತಿನಿಸು, ಫರ್ನಿಚರ್, ವಿದ್ಯುತ್ ಸಾಮಾಗ್ರಿ, ರೆಫ್ರಿಜರೇಟರ್ ಹಾಗೂ ಹಳೆ ದಾಸ್ತಾನುಗಳು ಮತ್ತು ಮೊಬೈಲ್ ಅಂಗಡಿಯಲ್ಲಿದ್ದ ಮೊಬೈಲ್‌ನ ಬಿಡಿಭಾಗಗಳು ಹಾನಿಗೊಂಡಿವೆ. ಇದರಿಂದ ಸುಮಾರು 3ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಶಾಸಕ ಕೆ.ರಘುಪತಿ ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂಗಡಿಯ ಮೂಲಸೌಕರ್ಯಗಳನ್ನು ನಗರಸಭೆ ವತಿಯಿಂದ ದುರಸ್ತಿಗೊಳಿಸು ವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಟಿ.ಜಿ.ಹೆಗ್ಡೆ, ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ರಾಜ್, ಅಭಿಯಂತರ ದುರ್ಗಾ ಪ್ರಸಾದ್ ಹಾಜರಿದ್ದರು.