ಜೋಕಟ್ಟೆ : ಎಂಆರ್‌ಪಿಎಲ್ ಮಾಲಿನ್ಯ ನಿಖರ ಪರಿಶೀಲನೆಗೆ ದ.ಕ. ಜಿಲ್ಲಾಧಿಕಾರಿ ಸೂಚನೆ

Update: 2020-09-16 14:28 GMT

ಮಂಗಳೂರು, ಸೆ.16: ಜೋಕಟ್ಟೆ ಆಸುಪಾಸಿನಲ್ಲಿ ಎಂಆರ್‌ಪಿಎಲ್ ನಿಂದ ಉಂಟಾಗುತ್ತಿರುವ ಶಬ್ದ ಮತ್ತು ವಾಯುಮಾಲಿನ್ಯದ ನಿಖರ ಪ್ರಮಾಣ ಮಾಡಲು ದ.ಕ. ಜಿಲ್ಲಾಧಿಕಾರಿ ಡಾ. ಕೆವಿ. ರಾಜೇಂದ್ರ ಸೂಚಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಎಂಆರ್‌ಪಿಎಲ್ 3ನೇ ಹಂತದ ಕೋಕ್ ಮತ್ತು ಸಲ್ಫರ್ ಘಟಕದಿಂದ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಈ ಪ್ರದೇಶದ ಸುತ್ತಮುತ್ತ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಕೂಡಲೇ ಎಂಆರ್‌ಪಿಎಲ್ ಸ್ಪಂದಿಸಿ ಜನರ ಅಹವಾಲು ಆಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಕೂಳೂರು ಜೋಕಟ್ಟೆ ರಸ್ತೆಯಲ್ಲಿ ತೀವ್ರ ಹೊಂಡ ಗುಂಡಿ ಬೀಳಲು ಈ ರಸ್ತೆಯನ್ನು ಬಳಸುತ್ತಿರುವ ಪ್ರಮುಖ ಕೈಗಾರಿಕಾ ಸಂಸ್ಥೆಗಳಿಂದಲೇ ಆಗಿದೆ. ಹಾಗಾಗಿ ಈ ರಸ್ತೆಯನ್ನು ಕೈಗಾರಿಕಾ ಸಂಸ್ಥೆಗಳಿಂದಲೇ ದುರಸ್ತಿಪಡಿಸುವಂತೆ ಕೆಐಎಡಿಬಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಈ ರಸ್ತೆಯಲ್ಲಿ ಘನ ವಾಹನಗಳ ಪಾರ್ಕಿಂಗ್‌ನಿಂದ ರಾತ್ರಿ ವೇಳೆ ಆಗುತ್ತಿರುವ ಅಪಘಾತ ತಪ್ಪಿಸಲು ಪಾರ್ಕಿಂಗ್ ನಿಯಂತ್ರಣಕ್ಕೆ ಪೊಲೀಸರಿಗೆ ಸೂಚಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಜೋಕಟ್ಟೆ ಪರಿಸರ ಜನತೆಯ ಅಹವಾಲಿಗೆ ಸೂಕ್ತವಾಗಿ ಸ್ಪಂದಿಸಲಾಗುವುದು ಎಂದು ಹೇಳಿದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಜೋಕಟ್ಟೆ ಸುತ್ತಮುತ್ತ ಮಾಲಿನ್ಯವಾಗುತ್ತಿರುವುದರ ಬಗ್ಗೆ ಸ್ಥಳೀಯರು ಹಲವು ವರ್ಷಗಳಿಂದ ಹೋರಾಡುತ್ತಿದ್ದು, ಸ್ಥಳೀಯರಿಗೆ ತನ್ನ ಬೆಂಬಲವಿದೆ. ಜಿಲ್ಲಾಡಳಿತ ಇಲ್ಲಿನ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಡಿಸಿಪಿ ಅರುಣಾಂಶಗಿರಿ, ಡಿಸಿಎಫ್ ಡಾ. ಕರಿಕಾಲನ್, ಮಂಗಳೂರು ಉತ್ತರ ವಿಭಾಗದ ಎಸಿಪಿ ಬೆಳ್ಳಿಯಪ್ಪ, ಮುಖಂಡರಾದ ಮುನೀರ್ ಕಾಟಿಪಳ್ಳ, ತಾಪಂ ಸದಸ್ಯ ಬಶೀರ್ ಅಹ್ಮದ್, ಎಂಆರ್‌ಪಿಎಲ್ ಮತ್ತು ಎಸ್‌ಇಝಡ್ ಅಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News