17,500 ಪುಟಗಳ ಆರೋಪಪಟ್ಟಿ ದಾಖಲು: ಸಿಎಎ ವಿರೋಧಿ ಪ್ರತಿಭಟನಕಾರರ ಹೆಸರು ಮಾತ್ರ ಉಲ್ಲೇಖ

Update: 2020-09-16 15:52 GMT

ಹೊಸದಿಲ್ಲಿ, ಸೆ.16: ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಬುಧವಾರ ನ್ಯಾಯಾಲಯಕ್ಕೆ 17,500 ಪುಟಗಳ ಆರೋಪಪಟ್ಟಿ ದಾಖಲಿಸಿದ್ದು, ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ 15 ಜನರ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.

ಎರಡು ಸ್ಟೀಲ್ ಟ್ರಂಕ್‌ಗಳಲ್ಲಿ ತುಂಬಿಸಿ ಸಲ್ಲಿಸಲಾಗಿರುವ ಆರೋಪಪಟ್ಟಿಯಲ್ಲಿ ಆರೋಪಿಗಳ ವಿರುದ್ಧದ ಆರೋಪದ ವಿವರವಿದೆ. ಅಮಾನತಗೊಂಡಿರುವ ಆಮ್ ಆದ್ಮಿ ಪಕ್ಷದ ಮುಖಂಡ ತಾಹಿರ್ ಹುಸೇನ್, ನತಾಶಾ ನರ್ವಾಲ್, ದೇವಾಂಗನಾ ಕಲಿತ, ಆಸಿಫ್ ಇಕ್ಬಾಲ್ ತನ್ಹ, ಇಶ್ರತ್ ಜಹಾನ್, ಮೀರನ್ ಹೈದರ್, ಸಫೂರಾ ಝರ್ಗರ್, ಖಲೀಫ್ ಸೈಫಿ ಸಹಿತ 15 ಜನರ ಹೆಸರನ್ನು ಕರ್ಕಾರ್‌ಡೂಮ ನ್ಯಾಯಾಲಯದ ವಿಶೇಷ ತನಿಖಾ ವಿಭಾಗಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಆರೋಪಪಟ್ಟಿಯಲ್ಲಿ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಹೆಸರಿಲ್ಲ.

ಈಗ ಬಂಧನದಲ್ಲಿರುವ ಇವರ ಹೆಸರನ್ನು ಪೂರಕ ಆರೋಪಪಟ್ಟಿಯಲ್ಲಿ ಸೇರಿಸುವ ನಿರೀಕ್ಷೆಯಿದೆ. ಪ್ರಕರಣದಲ್ಲಿ ಇದುವರೆಗೆ ಬಂಧಿಸಲಾಗಿರುವ 21 ಜನರಲ್ಲಿ 15 ಜನರ ವಿರುದ್ಧ ವೈಜ್ಞಾನಿಕ ಪುರಾವೆ, ದಾಖಲೆಯ ಸಾಕ್ಷ ಹಾಗೂ ಪ್ರಮಾಣಪತ್ರದ ಪುರಾವೆಯ ಆಧಾರದಲ್ಲಿ ಆರೋಪಪಟ್ಟಿ ದಾಖಲಿಸಲಾಗಿದೆ. ಉಳಿದ 6 ಜನರ ವಿರುದ್ಧ ಸಾಕಷ್ಟು ಪುರಾವೆ ಲಭಿಸಿದ ಬಳಿಕ ಆರೋಪಪಟ್ಟಿ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಆರೋಪಪಟ್ಟಿಯಲ್ಲಿ ಹೆಸರು ಇರುವವರು ಈಶಾನ್ಯ ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರದ ಪಿತೂರಿ ನಡೆಸಿದವರು. ಸೀಲಾಂಪುರ ಮತ್ತು ಜಫ್ರಾಬಾದ್‌ನಲ್ಲಿ ನಡೆದಿದ್ದ ಹಿಂಸಾಚಾರವನ್ನು ವ್ಯವಸ್ಥೆಗೊಳಿಸಲು ಎರಡು ವಾಟ್ಸ್ಯಾಪ್ ಗುಂಪನ್ನು ರಚಿಸಲಾಗಿತ್ತು. ಆರಂಭದಿಂದಲೇ ಪ್ರಜಾತಾಂತ್ರಿಕ ರೀತಿಯಲ್ಲಿ ಪ್ರತಿಭಟನೆ ನಡೆದಿಲ್ಲ. ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಉದ್ದೇಶ ಪ್ರತಿಭಟನೆಯ ಹಿಂದೆ ಇತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News