ಮಲ್ಪೆ ಸಮುದ್ರ ಮಧ್ಯೆ ಮೀನುಗಾರಿಕಾ ಬೋಟು ಮುಳುಗಡೆ

Update: 2020-09-16 16:00 GMT

ಮಲ್ಪೆ, ಸೆ.16: ಮೀನುಗಾರಿಕೆ ಮುಗಿಸಿ ಮಲ್ಪೆ ಬಂದರಿಗೆ ವಾಪಾಸ್ಸಾಗುತ್ತಿದ್ದ ಪರ್ಸಿನ್ ಬೋಟೊಂದು ಸೆ.15ರಂದು ರಾತ್ರಿ 9ಗಂಟೆ ಸುಮಾರಿಗೆ ಏಳು ಮಾರು ಆಳ ಸಮುದ್ರದಲ್ಲಿ ಬಂಡೆಗೆ ಢಿಕ್ಕಿ ಹೊಡೆದು ಮುಳುಗಡೆಯಾಗಿದ್ದು, ಬೋಟಿನಲ್ಲಿದ್ದ 28 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಕೊಡವೂರು ಗ್ರಾಮದ ಕಾನಂಗಿಯ ಶ್ರೀಕಾಂತ್ ಪುತ್ರನ್ ಎಂಬವರಿಗೆ ಸೇರಿದ ಹನುಮತೀರ್ಥ ಎಂಬ ಹೆಸರಿನ ಮೀನುಗಾರಿಕಾ ಪರ್ಸಿನ್ ಬೋಟಿ ನಲ್ಲಿ 28 ಮಂದಿ ಮೀನುಗಾರರು ಸೆ.15ರಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು.

ಮೀನುಗಾರಿಕೆ ಮುಗಿಸಿ ರಾತ್ರಿ ವಾಪಾಸ್ಸು ಬರುತ್ತಿದ್ದ ವೇಳೆ ಬೋಟಿನ ಸ್ಟೆರಿಂಗ್ ತುಂಡಾಗಿ, ಬೋಟು ನಿಯಂತ್ರಣ ತಪ್ಪಿ ಸಮೀಪದಲ್ಲಿದ್ದ ಕಲ್ಲು ಬಂಡೆಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಮಾಹಿತಿ ತಿಳಿದು ಮಲ್ಪೆ ಬಂದರಿನಿಂದ ನಾಲ್ಕು ಟ್ರಾಲ್‌ದೋಣಿಯಲ್ಲಿ ಮೀನುಗಾರರು ಸ್ಥಳಕ್ಕೆ ಕೂಡಲೇ ಧಾವಿಸಿ ಬಂದರು. ಆದರೆ ಬೋಟಿನೊಳಗೆ ನೀರು ತುಂಬಿದ ಪರಿಣಾಮ ಬೋಟು ಸಮುದ್ರ ಮಧ್ಯೆಯೇ ಮುಳುಗಿತು.

ತಕ್ಷಣವೇ ಬೋಟಿನಲ್ಲಿದ್ದ ಎಲ್ಲ ಮೀನುಗಾರರನ್ನು ರಕ್ಷಿಸಿ ಬಂದರಿಗೆ ಕರೆ ತರ ಲಾಯಿತು. ಈ ಅವಘಡದಿಂದ ಬೋಟಿನಲ್ಲಿದ್ದ ಉದಯ ಮತ್ತು ಸದಾನಂದ ಎಂಬವರು ಗಾಯಗೊಂಡಿದ್ದಾರೆ. ಇವರನ್ನು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಬೋಟಿನಲ್ಲಿದ್ದ ಮೀನಿನ ಬಲೆ, ಜಿಪಿಎಸ್, 6000 ಲೀಟರ್ ಡಿಸೇಲ್ ಸೇರಿದಂತೆ ಇತರ ಸಲಕರಣೆಗಳು ಬೋಟಿನೊಂದಿಗೆ ನೀರಿನಲ್ಲಿ ಮುಳುಗಿರುವುದ ರಿಂದ ಸುಮಾರು 1.70 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಶ್ರೀಕಾಂತ್ ಪುತ್ರನ್ ಮಲ್ಪೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News