ಕೋವಿಡ್: ಬುಧವಾರವೂ ಉಡುಪಿಯಲ್ಲಿ ಪ್ರಕಟಗೊಳ್ಳದ ವರದಿ

Update: 2020-09-16 16:15 GMT

ಉಡುಪಿ, ಸೆ. 16: ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಕರೆ ಯಂತೆ ಜಿಲ್ಲೆಯ ಸರಕಾರಿ ವೈದ್ಯಾಧಿಕಾರಿಗಳು ಸತತ ಎರಡನೇ ದಿನವೂ ಆನ್‌ಲೈನ್ ಸಹಿತ ಕೆಲವು ಸರಕಾರಿ ಸೇವೆಗಳಿಂದ ದೂರು ಉಳಿದ ಹಿನ್ನೆಲೆಯಲ್ಲಿ ಜಿಲ್ಲೆಯ ದೈನಂದಿನ ಕೋವಿಡ್ ವರದಿ ಇಂದೂ ಸಹ ಪ್ರಕಟಗೊಂಡಿಲ್ಲ.

ಈ ಹಿಂದೆ ಜಿಲ್ಲೆಯಲ್ಲಿ ಬಾಕಿ ಇದ್ದ ಸಂಗ್ರಹಿತ ಗಂಟಲುದ್ರವ ಮಾದರಿಗಳ ಪರೀಕ್ಷೆಗಳಲ್ಲಿ ಇಂದು 120ರ ವರದಿ ಪಾಸಿಟಿವ್ ಆಗಿ ಬಂದಿದೆ ಎಂದು ತಿಳಿದುಬಂದಿದೆ. ಆದರೆ ಇದು ಅಧಿಕೃತವಾಗಿ ಪ್ರಕಟಗೊಂಡಿಲ್ಲ. ಇಂದು ರಾಜ್ಯ ಮಟ್ಟದ ಬುಲೆಟಿನ್ ಸೇರಿದಂತೆ ಯಾವುದೇ ಜಿಲ್ಲೆಗಳಿಂದಲೂ ದೈನಂದಿನ ವರದಿ ಇಷ್ಟರವರೆಗೆ ಅಧಿಕೃತವಾಗಿ ಪ್ರಕಟಗೊಂಡಿಲ್ಲ.

ಗುರುವಾರ ಕರ್ತವ್ಯಕ್ಕೆ?: ರಾಜ್ಯ ಸರಕಾರ, ಸರಕಾರಿ ವೈದ್ಯಾಧಿಕಾರಿಗಳ ಹೆಚ್ಚಿನೆಲ್ಲಾ ಬೇಡಿಕೆಗಳಿಗೆ ಒಪ್ಪಿ ಕೊಂಡಿರುವುದಾಗಿ ತಿಳಿದುಬಂದಿದ್ದು, ಇದರಿಂದ ನಾಳೆ ವೈದ್ಯಾಧಿಕಾರಿಗಳು ಮತ್ತೆ ತಮ್ಮ ಕೋವಿಡ್-19 ಕರ್ತವ್ಯವನ್ನು ಪುನರಾರಂಭಿಸುವ ಸಾಧ್ಯತೆ ಇದೆ. ಹೀಗಾದರೆ ಸಂಜೆ ವೇಳೆ ಎಂದಿನಂತೆ ಕೋವಿಡ್ ದೈನಂದಿನ ಬುಲೆಟಿನ್ ಪ್ರಕಟಗೊಳ್ಳಲಿದೆ ಎಂದು ಜಿಲ್ಲಾ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಮೂಲ ತಿಳಿಸಿವೆ.

ಜಿಲ್ಲೆಯ ವೈದ್ಯಾಧಿಕಾರಿಗಳೆಲ್ಲರೂ ಮುಷ್ಕರದಲ್ಲಿದ್ದರೂ, ಕೋವಿಡ್‌ಗೆ ಇತರ ಕಾರ್ಯಗಳು ಎಂದಿನಂತೆ ನಡೆಯುತ್ತಿವೆ. ಫೀವರ್ ಕ್ಲಿನಿಕ್, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾದರಿಗಳ ಸಂಗ್ರಹ ಇಂದೂ ಕೋವಿಡ್ ವಾರಿಯರ್ ಸಿಬ್ಬಂದಿಗಳಿಂದ ಯಥಾಪ್ರಕಾರ ನಡೆದಿದೆ. ಇವುಗಳ ವರದಿ ಹಾಗೂ ಅಂಕಿಅಂಶ ಗಳನ್ನು ಮಾತ್ರ ಸರಕಾರಕ್ಕೆ ಕಳುಹಿಸುತ್ತಿಲ್ಲ ಎಂದು ಈ ಮೂಲ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News