​ಎಂಯುಪಿಯಿಂದ ಕೋವಿಡ್-19 ಕುರಿತ ಇ-ಪುಸ್ತಕ ಬಿಡುಗಡೆ

Update: 2020-09-16 16:19 GMT

ಉಡುಪಿ, ಸೆ.16: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಯ ಮಣಿಪಾಲ ಯುನಿವರ್ಸಲ್ ಪ್ರೆಸ್ (ಎಂಯುಪಿ) ವತಿಯಿಂದ ಹೊರ ತರಲಾದ ಕೋವಿಡ್-19ರ ಕುರಿತು ಸಮಗ್ರ ಮಾಹಿತಿ ನೀಡುವ ಇ-ಪುಸ್ತಕ ‘ಕೋವಿಡ್-19: ಎ ಮಲ್ಟಿಡೈಮೆನ್ಶನಲ್ ರೆಸ್ಪಾನ್’ನ್ನು ಇತ್ತೀಚೆಗೆ ಆಲ್‌ಲೈನ್‌ನಲ್ಲಿ ಬಿಡುಗಡೆಗೊಳಿಸಲಾಯಿತು.

ವರ್ಚುವಲ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಹೆ ಕುಲಪತಿ ಲೆ.ಕ.(ನಿವೃತ್ತ) ಎಂ.ಡಿ.ವೆಂಕಟೇಶ್ ಮಾತನಾಡಿ, ಕೋವಿಡ್-19ರ ನಿರ್ವಹಣೆಯಲ್ಲಿ ಒಳಗೊಂಡ ಎಲ್ಲಾ ವೃತ್ತಿಪರರು, ಆರೋಗ್ಯ ಕಾರ್ಯಕರ್ತರು ಹಾಗೂ ಆಡಳಿತಗಾರರಿಗೆ ಈ ಪುಸ್ತಕ ಅತ್ಯಂತ ಉಪಯುಕ್ತವಾಗಿದೆ. ಕೋವಿಡ್‌ಗೆ ಸಂಬಂಧಿಸಿದಂತೆ ಇಂದಿನ ಸ್ಥಿತಿಯ ಬಗ್ಗೆ ತೀವ್ರ ಕಳವಳವ್ಯಕ್ತಪಡಿಸಿದ ಅವರು, ಕೋವಿಡ್‌ನ ವಿವಿಧ ಅಂಶಗಳ ಕುರಿತಂತೆ ಈಗ ಬರುತ್ತಿರುವ ಮಾಹಿತಿಗಳಿಂದ ಮಾನವ ಕುಲ ತತ್ತರಿಸಿಹೋಗಿದೆ. ಆದರೆ ಈ ಇ-ಪುಸ್ತಕ ಸೋಂಕಿನ ಕುರಿತಂತೆ ವಿವಿಧ ಆಯಾಮಗಳಲ್ಲಿ ಸಮಗ್ರ ಮಾಹಿತಿ ನೀಡುತ್ತಿದೆ ಎಂದರು.

ಮತ್ತೊಬ್ಬ ಮುಖ್ಯ ಅತಿಥಿ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ, ಇಂದಿನ ಸಂಕಷ್ಟ ಕಾಲದಲ್ಲಿ ಮಾರಕ ಕಾಯಿಲೆಯ ಕುರಿತು ಜನರಿಗೆ ಸರಿಯಾದ ಮಾಹಿತಿ ನೀಡಿ, ಜಾಗೃತಿ ಮೂಡಿಸಲು ಈ ಪುಸ್ತಕವನ್ನು ಮಾಹೆ ಪ್ರಕಟಿಸಿದೆ. ಇದರ ಬಗ್ಗೆ ದೇಶ ತುರ್ತು ಗಮನಹರಿಸ ಬೇಕಲ್ಲದೇ, ಬಲಿಷ್ಠ ಆರೋಗ್ಯ ವ್ಯವಸ್ಥೆಯನ್ನು, ಜಾಗತಿಕ ಆರೋಗ್ಯ ಭದ್ರತೆಯನ್ನು ರೂಪಿಸಬೇಕಾಗಿದೆ ಎಂದರು.

ಪುಸ್ತಕದ ಮೂವರು ಸಂಪಾದಕರಲ್ಲಿ ಒಬ್ಬರಾದ ರವಿರಾಜ್ ಎನ್.ಎಸ್. ಮಾತನಾಡಿ, ಈ ಕ್ಷೇತ್ರದ ತಜ್ಞರು ನೀಡಿದ ಕೊಡುಗೆಯನ್ನು ಸ್ಮರಿಸಿ ದರು. ಈ ಪುಸ್ತಕ ಸೋಂಕು ಶಾಸ್ತ್ರ, ಸಾರ್ವಜನಿಕ ಆರೋಗ್ಯ ಮತ್ತು ನೀತಿ, ರೋಗ ಪತ್ತೆಹಚ್ಚುವಿಕೆ, ರೋಗ ನಿರ್ವಹಣೆ ಹಾಗೂ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಔಷಧ ಸಂಶೋಧನೆಯ ಕುರಿತು ಸಾರ್ವಜನಿಕರು ಕೋವಿಡ್ ಸಮಯದಲ್ಲಿ ಅನುಕರಿಸಬೇಕಾದ ಎಚ್ಚರಿಕೆ ಕುರಿತು ಮಾಹಿತಿ ನೀಡುತ್ತದೆ ಎಂದರು.

ಮಣಿಪಾಲ ಯುನಿವರ್ಸಿಟಿ ಪ್ರೆಸ್ ಮುಖ್ಯ ಸಂಪಾದಕಿ ಡಾ.ನೀತಾ ಇನಾಂದಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಎಂಸಿಪಿಎಸ್‌ನ ಡಾ.ಎನ್. ಉಡುಪ ಸ್ವಾಗತಿಸಿದರು. ಮೈಕ್ರೋಬಯೋಲಜಿ ವಿಭಾಗದ ಅಸೋಸಿಯೇಟ್ ಡೀನ್ ಡಾ.ಚಿರಂಜೀವಿ ಮುಖ್ಯೋಪಾಧ್ಯಾಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News