ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರಬಿಂದು: ವಿಶ್ವಸಂಸ್ಥೆಯಲ್ಲಿ ಪಾಕ್ ಹೇಳಿಕೆಗೆ ಭಾರತದ ತಿರುಗೇಟು

Update: 2020-09-16 18:18 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಸೆ. 16: ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರಬಿಂದುವಾಗಿದೆ ಎಂದು ಮಂಗಳವಾರ ಬಣ್ಣಿಸಿರುವ ಭಾರತ, ಹಿಂದೂಗಳು, ಕ್ರೈಸ್ತರು ಮತ್ತು ಸಿಖ್ಖರು ಸೇರಿದಂತೆ ತನ್ನ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ನಿರಂತರವಾಗಿ ಹಿಂಸಿಸುತ್ತಿರುವ ಪಾಕಿಸ್ತಾನದಿಂದ ಮಾನವಹಕ್ಕುಗಳ ಕುರಿತ ಬಿಟ್ಟಿ ಉಪದೇಶ ಯಾರಿಗೂ ಬೇಕಾಗಿಲ್ಲ ಎಂದು ಹೇಳಿದೆ.

ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ 45ನೇ ಅಧಿವೇಶನದಲ್ಲಿ ಪಾಕಿಸ್ತಾನ ನೀಡಿರುವ ಹೇಳಿಕೆಗಳಿಗೆ ತನ್ನ ಉತ್ತರಿಸುವ ಹಕ್ಕನ್ನು ಚಲಾಯಿಸಿ ತಿರುಗೇಟು ನೀಡಿರುವ ಭಾರತೀಯ ಪ್ರತಿನಿಧಿ, ತನ್ನ ಸ್ವಾರ್ಥಪೂರಿತ ದುರುದ್ದೇಶಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಸುಳ್ಳು ಮತ್ತು ಸೃಷ್ಟಿಸಿದ ಹೇಳಿಕೆಗಳನ್ನು ನೀಡುವ ಮೂಲಕ ಭಾರತದ ವಿರುದ್ಧ ಅಪಪ್ರಚಾರ ಮಾಡುವುದು ಪಾಕಿಸ್ತಾನಕ್ಕೆ ರೂಢಿಯಾಗಿ ಬಿಟ್ಟಿದೆ ಎಂದರು.

‘‘ತನ್ನ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ನಿರಂತರವಾಗಿ ದಮನಿಸುವ, ಭಯೋತ್ಪಾದನೆಯ ಕೇಂದ್ರಬಿಂದುವಾಗಿರುವ, ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿರುವ ಜನರಿಗೆ ಪಿಂಚಣಿಗಳನ್ನು ನೀಡಿದ ಖ್ಯಾತಿ ಹೊಂದಿರುವ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹೋರಾಡುವುದಕ್ಕಾಗಿ ಸಾವಿರಾರು ಭಯೋತ್ಪಾದಕರಿಗೆ ತರಬೇತಿ ನೀಡುತ್ತಿರುವುದನ್ನು ಹೆಮ್ಮೆಯಿಂದ ಒಪ್ಪಿಕೊಂಡಿರುವ ಪ್ರಧಾನಿಯೊಬ್ಬರನ್ನು ಹೊಂದಿರುವ ದೇಶವೊಂದರಿಂದ ಭಾರತಕ್ಕಾಗಲಿ, ಇತರ ಯಾರಿಗೇ ಆಗಲಿ ಬಿಟ್ಟಿ ಉಪದೇಶ ಬೇಕಾಗಿಲ್ಲ’’ ಎಂದು ಭಾರತೀಯ ಪ್ರತಿನಿಧಿ ಹೇಳಿದರು.

ಇಸ್ಲಾಮಿಕ್ ಸಹಕಾರ ಒಕ್ಕೂಟ (ಒಐಸಿ)ವು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ನೀಡಿರುವ ಹೇಳಿಕೆಯನ್ನೂ ಭಾರತ ತಿರಸ್ಕರಿಸಿದೆ.

‘‘ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಮಾತನಾಡುವ ಹಕ್ಕು ಒಐಸಿಗಿಲ್ಲ. ಸ್ವತಃ ಅದು ತನ್ನನ್ನು ದುರುಪಯೋಗಪಡಿಸಿಕೊಳ್ಳಲು ಪಾಕಿಸ್ತಾನಕ್ಕೆ ಅವಕಾಶ ನೀಡಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ’’ ಎಂದು ಭಾರತ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News