ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ದುಬೈ

Update: 2020-09-18 14:24 GMT

ದುಬೈ (ಯುಎಇ), ಸೆ. 18: ಕಳೆದ ಎರಡು ವಾರಗಳಲ್ಲಿ ಎರಡು ಬಾರಿ ಕೋವಿಡ್ ಪಾಸಿಟಿವ್ (ಕೊರೋನ ವೈರಸ್ ಸೋಂಕು ಇದೆ ಎನ್ನುವುದು ಖಚಿತವಾದ) ಪ್ರಮಾಣಪತ್ರಗಳನ್ನು ಹೊಂದಿರುವ ರೋಗಿಗಳನ್ನು ಕರೆತಂದಿರುವುದಕ್ಕಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಹಾರಾಟವನ್ನು ದುಬೈ ನಾಗರಿಕ ವಾಯುಯಾನ ಪ್ರಾಧಿಕಾರ ಅಕ್ಟೋಬರ್ 2ರವರೆಗೆ ಸ್ಥಗಿತಗೊಳಿಸಿದೆ ಎಂದು ಹಿರಿಯ ಸರಕಾರಿ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಯುಎಇ ಸರಕಾರದ ನಿಯಮಗಳ ಪ್ರಕಾರ, ಭಾರತದಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕನು ಪ್ರಯಾಣಕ್ಕಿಂತ 96 ಗಂಟೆಗಳ ಮೊದಲು ಮಾಡಲಾದ ಆರ್‌ಟಿ-ಪಿಸಿಆರ್ ಪರೀಕ್ಷೆಯಿಂದ ಲಭಿಸಿದ ಕೋವಿಡ್-ನೆಗೆಟಿವ್ (ಕೊರೋನ ವೈರಸ್ ಸೋಂಕು ಇಲ್ಲ ಎನ್ನುವುದನ್ನು ಖಚಿತಪಡಿಸುವ) ಪ್ರಮಾಣಪತ್ರದ ಮೂಲ ಪ್ರತಿಯೊಂದಿಗೆ ಬರಬೇಕು.

‘‘ಸೆಪ್ಟಂಬರ್ 2ರಂದು ಪಡೆದ ಕೋವಿಡ್ ಪಾಸಿಟಿವ್ ಪ್ರಮಾಣಪತ್ರವನ್ನು ಹೊಂದಿದ ಪ್ರಯಾಣಿಕನೊಬ್ಬ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಜೈಪುರ-ದುಬೈ ವಿಮಾನದ ಮೂಲಕ ಸೆಪ್ಟಂಬರ್ 4ರಂದು ದುಬೈಗೆ ಬಂದಿದ್ದಾರೆ. ಹಿಂದೆಯೂ, ಇದೇ ವಿಮಾನಯಾನ ಸಂಸ್ಥೆಯ ಇನ್ನೊಂದು ವಿಮಾನದಲ್ಲಿ ಕೊರೋನ ಸೋಂಕು ಪೀಡಿತ ಪ್ರಯಾಣಿಕರೊಬ್ಬರು ದುಬೈಗೆ ಬಂದಿದ್ದರು’’ ಎಂದು ಓರ್ವ ಅಧಿಕಾರಿ ಹೇಳಿದ್ದಾರೆ.

ಹಾಗಾಗಿ, ದುಬೈ ನಾಗರಿಕ ವಾಯುಯಾನ ಪ್ರಾಧಿಕಾರವು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಹಾರಾಟವನ್ನು ಸೆಪ್ಟಂಬರ್ 18ರಿಂದ ಅಕ್ಟೋಬರ್ 2ರವರೆಗೆ ಸ್ಥಗಿತಗೊಳಿಸಿದೆ ಎಂದು ಅವರು ತಿಳಿಸಿದರು.

ತೊಂದರೆಗೊಳಗಾದ ಪ್ರಯಾಣಿಕರಿಗೆ ಶಾರ್ಜಾದಿಂದ ಪ್ರಯಾಣ ವ್ಯವಸ್ಥೆ

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಿಗೆ ದುಬೈ ನಾಗರಿಕ ವಾಯುಯಾನ ಪ್ರಾಧಿಕಾರ ಎರಡು ವಾರಗಳ ಅವಧಿಗೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ, ದುಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತಕ್ಕೆ ಪ್ರಯಾಣಿಸಬೇಕಾಗಿರುವ ಪ್ರಯಾಣಿಕರು ಈ ಅವಧಿಯಲ್ಲಿ ಶಾರ್ಜಾದಿಂದ ಪ್ರಯಾಣಿಸಲಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಿಸಿದೆ.

ದುಬೈ ವಿಮಾನ ನಿಲ್ದಾಣದಿಂದ ಭಾರತಕ್ಕೆ ಪ್ರಯಾಣಿಸಲು ಈಗಾಗಲೇ ಟಿಕೆಟ್ ಮಾಡಿರುವ ಪ್ರಯಾಣಿಕರಿಗೆ ಮುಂದಿನ ದಿನಾಂಕದಲ್ಲಿ ಪ್ರಯಾಣ ಕೈಗೊಳ್ಳುವ ಅವಕಾಶವನ್ನೂ ನೀಡಲಾಗುವುದು ಎಂದು ಅದು ತಿಳಿಸಿದೆ.

ದುಬೈ ನಾಗರಿಕ ವಾಯುಯಾನ ಪ್ರಾಧಿಕಾರದ ನಿರ್ಧಾರದಿಂದ ಸಂಕಷ್ಟಕ್ಕೆ ಒಳಗಾಗಿರುವ ಪ್ರಯಾಣಿಕರಿಗಾಗಿ ಶಾರ್ಜಾ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಚ್ಚುವರಿ ವಿಮಾನಗಳನ್ನು ಹಾರಿಸಲಾಗುವುದು ಎಂದು ಮಾಧ್ಯಮಗಳಿಗೆ ನೀಡಿದ ಅಧಿಕೃತ ಹೇಳಿಕೆಯೊಂದರಲ್ಲಿ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News