ಐತಿಹಾಸಿಕ ಬಾವಿ ಉಳಿಸಲು ಕ್ರಮ: ಶಾಸಕ ವೇದವ್ಯಾಸ ಕಾಮತ್

Update: 2020-09-18 12:48 GMT

ಮಂಗಳೂರು, ಸೆ.18: ಹಂಪನಕಟ್ಟೆಯಲ್ಲಿ ಶತಮಾನ ಹಳೆಯದ್ದು ಎನ್ನಲಾದ ಬಾವಿಯನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಸ್ಮಾರ್ಟ್ ಸಿಟಿ ಹಾಗೂ ಪುರಾತತ್ವ ಇಲಾಖೆಯನ್ನು ಜೋಡಿಸಿಕೊಂಡು ಕ್ರಮಕ್ಕೆ ಚರ್ಚಿಸಲಾಗುವುದು ಎಂದು ಶಾಸ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಮೇಯರ್ ದಿವಾಕರ ಪಾಂಡೇಶ್ವರ ಜತೆಯಲ್ಲಿ ಇಂದು ಬಾವಿ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ ಅವರು, ಜಿಲ್ಲಾಕಾರಿ ಕಚೇರಿಯಲ್ಲಿ ಶನಿವಾರ ದಂದು ಸ್ಮಾರ್ಟ್‌ಸಿಟಿ ಅಕಾರಿಗಳ ಸಭೆ ನಡೆಯಲಿದ್ದು, ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಈ ಬಾವಿಯ ಅಭಿವೃದ್ಧಿ ಮಾಡುವ ಬಗ್ಗೆ ಚರ್ಚಿಸಲಾಗು ವುದು. ಬಾವಿಯ ನೀರನ್ನು ಉಪಯೋಗಿಸುವ ಕುರಿತಂತೆ ವೈಜ್ಞಾನಿಕ ತಪಾಸಣೆ ನಡೆಸಬೇಕಿದೆ ಎಂದು ಅವರು ಹೇಳಿದರು.

ಕಾರ್ಪೋರೇಟರ್‌ಗಳಾದ ಪೂರ್ಣಿಮಾ, ಲೀಲಾವತಿ, ಚಂದ್ರಾವತಿ, ಜಯಶ್ರೀ ಕುಡ್ವ, ಕೆನರಾ ಜುವೆಲರ್ಸ್‌ ಮಾಲಕ ಧನಂಜಯ ಪಾಲ್ಕೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಾವಿ ರಕ್ಷಿಸಲು ಮನವಿ

ಶತಮಾನದ ಇತಿಹಾಸ ಹೊಂದಿರುವ ಬಾವಿಯನ್ನು ಉಳಿಸಬೇಕು ಎಂಬುವುದಾಗಿ ಕೆನರಾ ಜುವೆಲರ್ಸ್‌ ಮಾಲಕ ಧನಂಜಯ ಪಾಲ್ಕೆ ಅವರು ಮನಪಾ ಮೇಯರ್ ದಿವಾಕರ್ ಪಾಂಡೇಶ್ವರಗೆ ಮನವಿ ನೀಡಿದ್ದಾರೆ.

‘ನಮ್ಮ ಸಂಸ್ಥೆಯ ಎದುರು ಭಾಗದಲ್ಲಿ 60 ವರ್ಷಗಳಿಗೂ ಹಿಂದೆ ಕುಡಿಯುವ ನೀರಿನ ಬಾವಿಯೊಂದಿತ್ತು. ಈ ಬಾವಿಯಿಂದ ನಾವು, ನಮ್ಮ ಮಳಿಗೆಯ ಬದಿಯಲ್ಲಿರುವ ಹೋಟೆಲ್ ತಾಜ್‌ಮಹಲ್ ಅಹ್ಮದ್ ಹಾಜೀ ಕಟ್ಟಡದವರು 1962ರವರೆಗೆ ನೀರು ಬಳಸುತ್ತಿದ್ದೆವು. ನಳ್ಳಿ ನೀರಿನ ಸಂಪರ್ಕ ಬಂದ ಮೇಲೆ ಬಾವಿಯ ನೀರು ಬಳಸಿಲ್ಲ. ಬಳಿಕ ಬಾವಿಗೆ ಕಾಂಕ್ರಿಟ್ ಸ್ಲ್ಯಾಬ್ ಅಳವಡಿಸಿದ್ದೆವು. ಕಾಲಾನುಕ್ರಮೇಣ ಅದರ ಮೇಲೆ ಡಾಂಬರು ಹಾಕಲಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಈ ಪ್ರದೇಶದಲ್ಲಿ ಕಾಂಕ್ರಿಟ್ ಕೆಲಸ ನಡೆಯುತ್ತಿದ್ದಾಗ ಈ ಬಾವಿ ಗೋಚರಿಸಿದೆ. ಶತಮಾನದ ಇತಿಹಾಸ ಹೊಂದಿರುವ ಈ ಬಾವಿ ರಕ್ಷಿಸಬೇಕು’ ಎಂದು ತಮ್ಮ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

100 ಅಡಿಯಷ್ಟು ಆಳದ ಬಾವಿ ಇಂದಿಗೂ ಸುಸ್ಥಿತಿ!

ಬಾವಿ ಸುಮಾರು 100 ಅಡಿ ಆಳ ಹೊಂದಿದೆ. ಕಳೆದ ಸುಮಾರು ನಾಲ್ಕು ದಶಕಗಳಿಂದೀಚೆಗೆ ಈ ಬಾವಿ ಡಾಮರು ರೋಡಿನೊಳಗೆ ಕಣ್ಮರೆಯಾ ಗಿತ್ತು. ಆದರೆ ಇದೀಗ ಮತ್ತೆ ಪತ್ತೆಯಾಗಿರುವ ಬಾವಿ ಸುಸ್ಥಿತಿಯಲ್ಲಿದ್ದು, ಹಳೆಯ ಕಾಲದ ನೆನಪುಗಳನ್ನು ಮೆಲುಕುಹಾಕಿದೆ. ಶತಮಾನದ ಹಿಂದೆ ಮಂಗಳೂರಿಗೆ ದೂರದಿಂದ ಬಂದವರಿಗೆ ಬಾಯಾರಿಕೆಗಾಗಿ ಸ್ಥಳೀಯರಾದ ಅಪ್ಪಣ್ಣ ಅವರು ಈಗಿನ ಹಂಪನಕಟ್ಟೆಯ ಅಶ್ವತ್ಥ ಮರದ ಕಟ್ಟೆಯ ಮೇಲೆ ಕುಳಿತು ನೀರು ಕೊಡುತ್ತಿದ್ದರು ಎಂದು ಹೇಳಲಾಗುತ್ತದೆ. ಆ ಕಾಲದಲ್ಲಿ ಅಪ್ಪಣ್ಣ ಅವರು ಇದೇ ಬಾವಿಯಿಂದ ನೀರು ತೆಗೆದುಕೊಂಡು ಬಂದು ನೀಡುತ್ತಿದ್ದರು ಎನ್ನಲಾಗುತ್ತಿದೆ. ಈ ರೀತಿ ಹಿಂದೆ ‘ಅಪ್ಪಣ್ಣ ಕಟ್ಟೆ’ಯಾಗಿದ್ದ ಆ ಪ್ರದೇಶ ಅನಂತರದಲ್ಲಿ ‘ಹಂಪನಕಟ್ಟೆ’ಯಾಗಿ ಹೆಸರು ಪಡೆದುಕೊಂಡಿದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News